×
Ad

ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಸಾವಿನ ಸಂಖ್ಯೆ 67ಕ್ಕೆ ಏರಿಕೆ

Update: 2020-06-22 21:15 IST

ಬೆಂಗಳೂರು, ಜೂ.22: ನಗರದಲ್ಲಿ ಸೋಮವಾರ 126 ಹೊಸ ಕೊರೋನ ಪ್ರಕರಣ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಸಾವಿನ ಸಂಖ್ಯೆ 67ಕ್ಕೇರಿದೆ. ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 38 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಸಾವಿನ ಸಂಖ್ಯೆ ಮಾತ್ರವಲ್ಲದೇ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಿದ್ದು, ಸೋಮವಾರ ದೃಢಪಟ್ಟ 126 ಹೊಸ ಪ್ರಕರಣಗಳು ಸೇರಿದಂತೆ ಕೊರೋನ ಸೋಂಕಿತರ ಸಂಖ್ಯೆ 1,398ಕ್ಕೆ ಏರಿಕೆಯಾಗಿದೆ.

ಮೂವರು ಮೃತ: ರೋಗಿ ನಂ.9,276, 45 ವರ್ಷದ ಪುರುಷ, ಬೆಂಗಳೂರು ನಿವಾಸಿಯಾಗಿದ್ದು, ಉಸಿರಾಟದ ಸಮಸ್ಯೆಯಿಂದ ಜೂ.12 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯೊಂದಿಗೆ ಅಸ್ತಮಾ(ಟಿಬಿ) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂ.15ರಂದು ಸಾವನ್ನಪ್ಪಿದ್ದರು.

ರೋಗಿ ನಂ-9,299, 38 ವರ್ಷದ ಮಹಿಳೆ. ಇವರು ಬೆಂಗಳೂರು ನಿವಾಸಿಯಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೂ.16ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಜೂ.17ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

ರೋಗಿ ನಂ-9,362, 70 ವರ್ಷದ ವೃದ್ಧ ಬೆಂಗಳೂರಿನ ನಿವಾಸಿಯಾಗಿದ್ದು, ಉಸಿರಾಟಸ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 20 ರಂದು ಜ್ವರ, ಕೆಮ್ಮು ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಜೂ. 20ರಂದೇ ಸಾವನ್ನಪ್ಪಿದ್ದಾರೆ

ಹೆಚ್ಚುತ್ತಿರುವ ಐ.ಎಲ್.ಐ ಪ್ರಕರಣ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಲಾಕ್‍ಡೌನ್ ಸಡಿಲಿಕೆ ನಂತರ ವಿಷಮ ಶೀತ ಜ್ವರ(ಐ.ಎಲ್.ಐ) ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನ ಸೋಂಕಿತರಲ್ಲಿ ವಿಷಮ ಶೀತ ಜ್ವರ ಕಾಣಿಸಿಕೊಳ್ಳುತ್ತಿದೆ.

15,199 ಜನರಿಗೆ ತಪಾಸಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಸೋಮವಾರ ಒಟ್ಟು 68 ಮಂದಿಯನ್ನು ಹಾಗೂ ಈವರೆಗೂ ಒಟ್ಟು 15,199 ಮಂದಿಯನ್ನು ತಪಾಸಣೆ ನಡೆಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಕೊರೋನ ಸೋಂಕು ಪತ್ತೆಯಾಗಿರುವ ಐದು ಪ್ರದೇಶಗಳನ್ನು ಮಾತ್ರ ಸೀಲ್‍ಡೌನ್ ಮಾಡಲು ಕ್ರಮವಹಿಸಲಾಗುತ್ತಿದೆ. ಈ ಪೈಕಿ ಸಿದ್ದಾಪುರ ಪ್ರದೇಶದ ಕೋವಿಡ್ ಸೋಂಕಿತರು ವಾಸವಿದ್ದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ವಿ.ವಿ.ಪುರಂ ಪ್ರದೇಶದ ಕೊರೋನ ಸೋಂಕಿತರು ವಾಸವಿದ್ದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಚಿಕ್ಕಪೇಟೆ ಪ್ರದೇಶದ ಕೊರೋನ ಸೋಂಕಿತರು ವಾಸವಿದ್ದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ವಿಶೇಷವಾಗಿ ಜನಸಾಂದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಹೊಲ್‍ಸೇಲ್ ಮಾರುಕಟ್ಟೆ ಪ್ರದೇಶಗಳಲ್ಲಿ ಸೀಲ್‍ಡೌನ್ ಕ್ರಮವನ್ನು ಜೂ.23ರಿಂದ ಜಾರಿಗೊಳಿಸಲಾಗುವುದು.

-ಬಿ.ಹೆಚ್ ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯ ಸ್ವಯಂ ಬಂದ್

ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸ್ವಯಂಪ್ರೇರಿತವಾಗಿ ಮುಚ್ಚುವ ತೀರ್ಮಾನವನ್ನು ಅಲ್ಲಿನ ಮಾರುಕಟ್ಟೆ ಆಸೋಸಿಯೇಷನ್ ವರ್ತಕರು ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸೋಂಕು ಪ್ರಕರಣಗಳು ಹೆಚ್ಚಳವಾಗದಂತೆ ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News