×
Ad

ಜೂ.24ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

Update: 2020-06-22 22:11 IST

ಬೆಂಗಳೂರು, ಜೂ.22: ಜೂ.24ರ ನಂತರ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಕಳೆದೆರಡು ಮೂರು ದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಮಳೆ ಜೂ.24ರ ನಂತರ ಚೇತರಿಕೆ ಕಾಣಲಿದ್ದು, ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯಾದ್ಯಂತ ಜೂನ್ ಅಂತ್ಯದವರೆಗೂ ಉತ್ತಮ ಮಳೆಯಾಗಲಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಎರಡರಲ್ಲೂ ಮೇಲ್ಮೈ ಸುಳಿಗಾಳಿ ಉಂಟಾಗುತ್ತಿರುವುದರಿಂದ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕಳೆದ ಎರಡು ವಾರಗಳಿಂದಲೂ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದಲೂ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ರಾಜ್ಯದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಇನ್ನೆರಡು ದಿನಗಳ ನಂತರ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಜೂ.24ರಿಂದ ಒಂದು ವಾರ ಕಾಲ ನಿರಂತರವಾಗಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ತಿಳಿಸಿದ್ದಾರೆ.

ಕೊಡುಗು, ಮಲೆನಾಡು ಭಾಗದಲ್ಲಿ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಪ್ರಮುಖ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದ್ದು, ಈ ಬಾರಿ ಜಲಾಶಯಗಳಿಗೂ ಜೂನ್ ತಿಂಗಳಿನಲ್ಲೇ ನೀರು ಹರಿದು ಬರಲಾರಂಭಿಸಿದೆ.

ಜಲಾಶಯಗಳಲ್ಲಿ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಈ ಬಾರಿ ವಾಡಿಕೆ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕಳೆದ ಬಾರಿಯಂತೆ ಈ ಬಾರಿಯೂ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News