ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಭಾರತ

Update: 2020-06-23 07:17 GMT

ಭಾರತದ ಸಂಪನ್ಮೂಲವೇ ಅದರ ದುಡಿಯುವ ಶಕ್ತಿ (ಮಾನವ ಸಂಪನ್ಮೂಲ) ಮತ್ತು ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲಗಳು. ದುಡಿಯುವ ಕೈಗಳಿಗೆ ಕೆಲಸ, ಇರುವ ಭೂಮಿಯನ್ನು ಆಹಾರದ ತಯಾರಿಕೆಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ಬಳಸಿಕೊಂಡಿದ್ದರೆ, ಭಾರತ ಎಂದೋ ಅಭಿವೃದ್ಧಿ ಹೊಂದಿರುತಿತ್ತೇನೋ. ಆದರೆ ಇದಕ್ಕೆ ತದ್ವಿರುದ್ಧವಾಗಿ 2001ರಲ್ಲಿ ಶೇ.72ರಷ್ಟಿದ್ದ ರೈತರು ಹಾಗೂ ಕೃಷಿ ಕಾರ್ಮಿಕರ ಪ್ರಮಾಣ 2011ರಲ್ಲಿ ಶೇ.70ಕ್ಕೆ ಇಳಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಪ್ರಮಾಣ ಶೇ.56ರಿಂದ 49ಕ್ಕೆ ಕುಸಿದಿದೆ.


ಕಳೆದ 24 ತಾಸುಗಳಲ್ಲಿ ದೇಶದಲ್ಲಿ 15,413 ಮತ್ತು ರಾಜ್ಯದಲ್ಲಿ ಸುಮಾರು 240ಕ್ಕೂ ಹೆಚ್ಚು ಜನರಲ್ಲಿ ಕೊರೋನ ದೃಢಪಟ್ಟಿದೆ. ರಾಜ್ಯದಲ್ಲಿ ಕೊರೋನ ಸೈನಿಕರಾಗಿ ದುಡಿಯುತ್ತಿರುವ 147 ಪೋಲಿಸರಿಗೆ ಸೋಂಕು ತಗಲಿದೆ. ಹಾಗೆಯೇ 17 ಪೋಲಿಸ್ ಠಾಣೆಗಳು ಸೀಲ್‌ಡೌನ್ ಆಗಿವೆ. ದೇಶದಲ್ಲಿ ಒಟ್ಟು 4 ಲಕ್ಷ ಜನ ಸೋಂಕಿತರಾಗಿದ್ದಾರೆ. ಇದಕ್ಕೆ ಮುನ್ಸೂಚನೆಯನ್ನು ಕರ್ನಾಟಕ ರಾಜ್ಯದ ಕೋವಿಡ್-19ರ ಆರೋಗ್ಯ ಕಾರ್ಯ ಮಂಡಳಿಯ ಅಧ್ಯಕ್ಷರಾದ ನಿಮ್ಹಾನ್ಸ್‌ನ ಡಾ.ವಿ.ರವಿ ಅವರು ನಾಲ್ಕನೇ ಲಾಕ್‌ಡೌನ್ ನಂತರ ಡಿಸೆಂಬರ್ ತಿಂಗಳವರೆಗೆ ಶೇ 50ರಷ್ಟು ಭಾರತೀಯರಲ್ಲಿ ಕೊರೋನ ಸೋಂಕು ಹರಡುತ್ತದೆ ಎನ್ನುವ ಆಘಾತಕಾರಿ ವಿಷಯವನ್ನು ಇತ್ತೀಚೆಗೆ ಹೊರಹಾಕಿದ್ದರು. ಇದನ್ನು ತಡೆಗಟ್ಟಲು ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೇಶಕ್ಕೆ ಮತ್ತು ಮನುಕುಲಕ್ಕೆ ತುಂಬಲಾರದ ನಷ್ಟವಾಗುವುದಲ್ಲದೇ ಪ್ರಪಂಚ ಮತ್ತು ಭಾರತದ ಮುಂದಿನ ಪೀಳಿಗೆಯ ಮೇಲೂ ಇದು ಮಾರಕವಾಗಿ ಪರಿಣಮಿಸಬಹುದು. ಭಾರತದ ಸಂಪನ್ಮೂಲವೇ ಅದರ ದುಡಿಯುವ ಶಕ್ತಿ (ಮಾನವ ಸಂಪನ್ಮೂಲ) ಮತ್ತು ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲಗಳು. ದುಡಿಯುವ ಕೈಗಳಿಗೆ ಕೆಲಸ, ಇರುವ ಭೂಮಿಯನ್ನು ಆಹಾರದ ತಯಾರಿಕೆಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ಬಳಸಿಕೊಂಡಿದ್ದರೆ, ಭಾರತ ಎಂದೋ ಅಭಿವೃದ್ಧಿ ಹೊಂದಿರುತಿತ್ತೇನೋ. ಆದರೆ ಇದಕ್ಕೆ ತದ್ವಿರುದ್ಧವಾಗಿ 2001ರಲ್ಲಿ ಶೇ.72ರಷ್ಟಿದ್ದ ರೈತರು ಹಾಗೂ ಕೃಷಿ ಕಾರ್ಮಿಕರ ಪ್ರಮಾಣ 2011ರಲ್ಲಿ ಶೇ.70ಕ್ಕೆ ಇಳಿಕೆಯಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಪ್ರಮಾಣ ಶೇ.56ರಿಂದ 49ಕ್ಕೆ ಕುಸಿದಿದೆ. ಇಡೀ ಭಾರತದ ಚಿತ್ರಣವೂ ಇದಕ್ಕೆ ಹೊರತಾಗಿಲ್ಲ. ಲಾಕ್‌ಡೌನ್‌ನಲ್ಲಿ ಲಕ್ಷಾಂತರ ಬಡವರು ಅನುಭವಿಸಿದ ನೋವು, ದೇಶ ವಿಭಜನೆಯ ನಂತರ ಭಾರತದಲ್ಲಿ ನಡೆದ ಮಾನವ ನಿರ್ಮಿತ ದೊಡ್ಡ ದುರಂತ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿರುವುದು ಅಚ್ಚರಿಯೇನಲ್ಲ. ಭಾರತದ ಜನಸಂಖ್ಯೆಯ ಶೇ.37ರಷ್ಟು ಜನರು ವಲಸಿಗರಾಗಿದ್ದಾರೆ. ಅವರಲ್ಲಿ ಕೆಲವರು ಕುಶಲಕರ್ಮಿಗಳು, ಕೆಲವರು ಅರೆಕುಶಲ ಮತ್ತೆ ಕೆಲವರು ಕೌಶಲ್ಯ ಇಲ್ಲದವರು. ಬಹಳಷ್ಟು ವಲಸಿಗರು ಬಡ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಒರಿಸ್ಸಾದವರಾಗಿದ್ದಾರೆ. ವಲಸಿಗರ ಸಂಖ್ಯೆ ಪ್ರತಿ ಹತ್ತು ವರ್ಷಗಳಲ್ಲಿ ಏರುತ್ತಲೇ ಇದೆ ಸಮೀಕ್ಷೆ ಪ್ರಕಾರ 2001 ರಲ್ಲಿ ಶೇ.30ರಿಂದ 2011 ರಲ್ಲಿ ಶೇ.37 ಕ್ಕೆ ಏರಿಕೆಯಾಗಿದೆ. ಇದು ಬಾಂಗ್ಲಾದೇಶದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಸರಿ ಸುಮಾರು ಶೇ.30ರಷ್ಟು ವಲಸಿಗರು 15-29 ವಯಸ್ಸಿನ ಯುವಕರಾಗಿರುತ್ತಾರೆ ಮತ್ತು 1.5 ಕೋಟಿ ಮಕ್ಕಳಿರುತ್ತಾರೆ. ಉದ್ಯೋಗ, ಮದುವೆ, ಹೊಟ್ಟೆಪಾಡು ಮತ್ತು ಬದುಕು ಕಟ್ಟಿಕೊಳ್ಳುವುದೇ ವಲಸೆಗೆ ಪ್ರಮುಖ ಕಾರಣ.

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರು ಹಿಂದುಳಿದ ವರ್ಗಗಳ ಜನರಿಗಿಂತ, ಹಿಂದುಳಿದ ವರ್ಗದ ಜನರು ಸಾಮಾನ್ಯ ವರ್ಗದ ಜನರಿಗಿಂತ ಹೆಚ್ಚಾಗಿ ವಲಸೆ ಹೋಗುತ್ತಾರೆ. ಸಾಮಾನ್ಯ ವರ್ಗದ ಜನರು ಉತ್ತಮ ಅವಕಾಶಗಳಿಗೆ ವಲಸೆ ಹೋದರೆ ಉಳಿದ ಎಲ್ಲಾ ವರ್ಗದ ಜನರು ಹೊಟ್ಟೆಪಾಡಿಗೆ ಮತ್ತು ಉದ್ಯೋಗವನ್ನು ಅರಸಿ ವಲಸೆ ಹೊಗುವರು. ಯುನೆಸ್ಕೋ ಅಧ್ಯಯನದ ಪ್ರಕಾರ ಸೂರತ್ ನಗರದಲ್ಲಿ ಸುಮಾರು ಶೇ.58, ದಿಲ್ಲಿ ಮತ್ತು ಮುಂಬೈನಲ್ಲಿ ಶೇ.43 ವಲಸಿಗರು ಕಂಡು ಬರುತ್ತಾರೆ. ಅವರು ದೇಶವನ್ನು ಕಟ್ಟಲು ತಮ್ಮ ರಕ್ತ, ಬೆವರು, ಕಣ್ಣೀರನ್ನು ಧಾರೆ ಎರೆಯುತ್ತಾರೆ. ಆದರೆ ಅವರಿಗೆ ಇರಲು ಸೂರಿಲ್ಲ, ತಿನ್ನಲು ಆಹಾರವಿಲ್ಲದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಲಾಕ್‌ಡೌನ್ ನಂತರ ವಲಸಿಗರು ಕೊರೋನಗಿಂತ, ಹಸಿವಿನಿಂದ ಮತ್ತು ತಮ್ಮ ಊರುಗಳಿಗೆ ತೆರಳುವ ದಾರಿಯಲ್ಲಿ ಜೀವ ಕಳೆದುಕೊಂಡಿದ್ದೇ ಹೆಚ್ಚು. ವಲಸೆ ಕಾರ್ಮಿಕರ ಸಂಕಷ್ಟ ನಿವಾರಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ ಆದರೆ, ಅಸಮರ್ಪಕ ಮತ್ತು ಲೋಪದಿಂದ ಕೂಡಿವೆ. ಒಗ್ಗಟ್ಟಿನ ಪ್ರಯತ್ನದ ಅವಶ್ಯವಿದೆ. ವಲಸೆ ಕಾರ್ಮಿಕರಿಗೆ ಅಗತ್ಯ ಪ್ರಯಾಣ, ಊಟ ಮತ್ತು ವಸತಿಯನ್ನು ರಾಜ್ಯ ಸರಕಾರಗಳು ಉಚಿತವಾಗಿ ಒದಗಿಸಬೇಕು ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವೇ ಆದೇಶ ನೀಡಿದೆ.

ಉದ್ಯೋಗ, ಆರ್ಥಿಕತೆ ಮತ್ತು ಸಾಮಾಜಿಕ ನ್ಯಾಯದ ಮಾನದಂಡಗಳ ಆಧಾರದ ಮೇಲೆ ಭಾರತವನ್ನು ಮತ್ತು ಅದರ ಅಭಿವೃದ್ಧಿಯನ್ನು ಅಳೆದರೆ, ಭಾರತದ ನೈಜ ಹಾಗೂ ವಿಭಿನ್ನ ಚಿತ್ರಣ ಕಾಣತೊಡಗುತ್ತದೆ. ಭಾರತಕ್ಕೆ ಸ್ವತಂತ್ರ ಬಂದು 72 ವರ್ಷಗಳಾದರೂ ಜನರ ಹಸಿವಿನ ಬೇಗೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಎಲ್ಲರಿಗೂ ಉದ್ಯೋಗ ನೀಡುವಲ್ಲಿ ಭಾರತ ಸೋತಿದೆ. ಹಾಗಾದರೆ ಭಾರತ ತಪ್ಪಿದ್ದೆಲ್ಲಿ? ಜನಸಂಖ್ಯೆಯನ್ನು ನಿಭಾಯಿಸುವಲ್ಲೋ ಅಥವಾ ಜನಸಂಖ್ಯೆಗನುಗುಣವಾಗಿ ಪಾಲಿಸಿಗಳನ್ನು ರೂಪಿಸುವಲ್ಲೋ ಇಲ್ಲವೆ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳದಿರುವಲ್ಲೋ?. ಒಂದಂತೂ ಸ್ಪಷ್ಟವಾಗಿ ಗೋಚರಿಸುವುದೆಂದರೆ, ನಮ್ಮ ರಾಜಕೀಯ ನಾಯಕರುಮತ್ತು ಆಡಳಿತಶಾಹಿಗಳು ನಮ್ಮ ದೇಶಕ್ಕೆ ಪೂರಕವಾದ ಅಭಿವೃದ್ಧಿಯ ಸ್ಪಷ್ಟ ನಿಲುವಿನಿಂದ ದೇಶವನ್ನು ನಡೆಸದೇ ಇರುವುದು. ಪ್ರತಿ ಆಡಳಿತ ಪಕ್ಷವೂ ಹಿಂದಿನ ಪಕ್ಷದ ಯೋಜನೆಗಳನ್ನು ಟೀಕಿಸುತ್ತಾ ಅದರ ಬೆಳವಣಿಗೆಯ ಮಟ್ಟವನ್ನು ಗಮನಿಸದೇ ತನ್ನದೇ ಮೂಗಿನ ನೇರಕ್ಕೆ ಗಮನಿಸಿ ಪೂರ್ವಾಪರಗಳನ್ನು ಯೋಚಿಸದೇ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು. 1991ರ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಯು ಭಾರತದಂತಹ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದೇಶಕ್ಕೆ ಲಾಭಕ್ಕಿಂತ ಮಾರಕವಾಗಿಯೇ ಪರಿಣಮಿಸಿದೆ. ಅದು ಗೋಚರವಾಗುತ್ತಿರುವುದು ಸದ್ಯದ ಕೊರೋನ ಸಮಯದಲ್ಲಿ.

ವಿವಿಧ ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತವನ್ನು ನಡೆಸಿವೆ. ಇದರ ತಪ್ಪನ್ನು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಮೀಸಲಾಗಿರಿಸದೇ ಸಮಗ್ರವಾಗಿ ನೋಡುವ ಅವಶ್ಯಕತೆ ಎದ್ದು ಕಾಣುತ್ತದೆ ಮತ್ತು ಆಗ ಸ್ಪಷ್ಟವಾಗಿ ಆದಂತಹ ತಪ್ಪುಗಳು ಗೋಚರಿಸುತ್ತವೆ. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣಗಳು ಒಂದಕ್ಕೊಂದು ಪೂರಕವೆಂಬಂತೆ ಭಾರತದ ದೊಡ್ಡ ಸಂಖ್ಯೆಯ ಬಡವರ್ಗವನ್ನು ಇನ್ನೂ ಬಡವರನ್ನ್ನಾಗಿ ಮಾಡಿದೆ ಮತ್ತು ಬಂಡವಾಳಶಾಹಿಗಳಿಗೆ ಇನ್ನು ಹೆಚ್ಚಿನ ಶಕ್ತಿ ನೀಡಿ ಹಣ ಗಳಿಸುವುದೊಂದೇ ಅವರ ಗುರಿಯನ್ನಾಗಿಸಿದೆ. ಆ ಹಣ ಗಳಿಕೆಗೆ ಬೇಕಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಇದು ಭಾರತಕ್ಕಷ್ಟೇ ಸೀಮಿತವಾಗದೇ ಇಡೀ ಪ್ರಪಂಚವೇ ಇದರ ದಾಸ್ಯದಲ್ಲಿ ನರಳುವಂತಾಗಿದೆ. ಇದಕ್ಕೆ ಮಿಗಿಲಾಗಿ ಯೋಚಿಸುವ ಕಾಲವೇ ಸಧ್ಯದ ಕೊರೋನ ನಂತರದ ಸಮಯವಾಗಬೇಕಿದೆ.

ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್ವರ್ಕ್ ಸಂಸ್ಥೆಯವರು ನಡೆಸಿದ ಮೂರನೇ ಸುತ್ತಿನ ಸಮೀಕ್ಷೆ ಪ್ರಕಾರ ಕೆಲಸ ಬಿಟ್ಟು ಮನೆಗೆ ತೆರಳಿದ ವಲಸೆ ಕಾರ್ಮಿಕರ ಸಂಕಷ್ಟ ಇನ್ನೂ ಹೆಚ್ಚಾಗಿದೆ. ಶೇ.63ರಷ್ಟು ಮಂದಿ ನಮ್ಮ ಜೇಬಿನಲ್ಲಿ 100ರೂ ಕೂಡ ಉಳಿದಿಲ್ಲ ಎಂದು ಹೇಳಿದ್ದಾರೆ. ಎಷ್ಟೋ ಜನ ಪ್ರಯಾಣಕ್ಕಾಗಿಯೇ ಸಾಲ ಮಾಡಿರುವುದು ಬೆಳಕಿಗೆ ಬಂದಿದೆ. ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಮತ್ತು ಇತರ ಹತ್ತು ಸಂಘಟನೆಗಳು ಜತೆಯಾಗಿ ನಡೆಸಿದ ಸಮೀಕ್ಷೆಯಲ್ಲಿ, ಕರ್ನಾಟಕದಲ್ಲಿ ಶೇ.72ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸುಮಾರು ಶೇ.27ರಷ್ಟು ಜನರು ತಮಗೆ ಸರಕಾರದಿಂದ ಯಾವುದೇ ನಗದು ನೆರವು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಖಾಸಗಿ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಶಿಕ್ಷಕರು, ಶಿಕ್ಷಕೇತರರು ಹಾಗೂ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಹಾಗೂ ಅರ್ಧಕ್ಕಿಂತಲೂ ಹೆಚ್ಚು ಜನರಿಗೆ ಕೆಲಸದಿಂದ ತೆಗೆದು ಹಾಕಲಾಗಿದೆ. ಕೊರೋನಗಿಂತ ಮುಂಚೆಯೇ ಭಾರತ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿತ್ತು. ಪ್ರತಿ ತಿಂಗಳು ಕನಿಷ್ಠ ಹತ್ತು ಲಕ್ಷ ಜನ ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಯಾಗುತ್ತಿದ್ದರು. ಅಂತಹ ಸಂದರ್ಭದಲ್ಲಿ ಭಾರತದ ಆರ್ಥಿಕತೆಗೆ ಮತ್ತು ಸಾಮಾನ್ಯ ಜನರ ಬದುಕಿಗೆ ಕೊರೋನ ಬರೆ ಎಳೆದಂತಾಗಿದೆ. ಸದ್ಯದ ಪರಿಸ್ಥಿತಿಯನ್ನು ಸರಿಪಡಿಸಲು ಅರ್ಥಶಾಸ್ತ್ರ ನೋಬೆಲ್ ವಿಜೇತರಾದ ಪೀಟರ್ ಡೈಮಂಡ್ ಮತ್ತು ಕ್ರಿಸ್ಟೋಫರ್ ಪಿಸ್ಸಾರೈಡ್ಸ್ ಸೂಚಿಸುವ ಹಾಗೆ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಾಗಬಾರದೆಂದರೆ ಪರಿಣಾಮಕಾರಿ ಬಡತನ ನಿರ್ಮೂಲನಾ ಸಾಧನವಾಗಿ ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮ ಜಾರಿಯಾಗಬೇಕು ಇದರಡಿಯಲ್ಲಿ ಕೆಲವು ತುರ್ತು ನಿಯಮಗಳನ್ನು ಅಳವಡಿಸಿ ಆದೇಶಗಳನ್ನು ಜಾರಿಗೆ ತಂದಲ್ಲಿ ನಮ್ಮ ದೇಶದ ಮಾನವ ಸಂಪನ್ಮೂಲವನ್ನು ಉಳಿಸಿ, ಆರ್ಥಿಕತೆಯನ್ನು ಸುಧಾರಿಸಬಹುದು.

ಅದನ್ನು ಅರ್ಥಮಾಡಿಕೊಳ್ಳಲಿರುವ ಎರಡು ಪ್ರಮುಖ ಅಂಶಗಳೆಂದರೆ, ಮೊದಲನೆಯದು, ಭಾರತ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಜೀವಿಸುತ್ತಿದೆಯೇ ಹೊರತು ನಗರಗಳಲ್ಲಿ ಇಲ್ಲ. ಎರಡನೆಯದು, ಸದ್ಯದ ಪರಿಸ್ಥಿತಿಯಲ್ಲಿ ವಲಸೆ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಬಹುದು ಹಾಗಾಗಿ ವಲಸೆಯನ್ನು ತಡೆಯುವುದು ಅತಿ ಅವಶ್ಯಕ. ಅದನ್ನು ತಡೆಯಲು ಮತ್ತು ಮೂಲ ಆದಾಯವನ್ನು ಹೆಚ್ಚಿಸಲು ಹಾಗೂ ನಿರುದ್ಯೋಗ ಸಮಸ್ಯೆಯಿಂದ ಭಾರತ ಹೊರಬರಲು ಈ ಕೆಳಗಿನವುಗಳನ್ನು ಪೂರೈಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ.

1. ಸಾಮಾನ್ಯ ವಸ್ತುಗಳ ಮೇಲೆ ಮತ್ತು ಆಹಾರ ಪದಾರ್ಥಗಳ ಮೇಲೆ ರಾಜ್ಯ ಸರಕಾರಗಳ ಮತ್ತು ಕೇಂದ್ರ ಸರಕಾರದ ಜಿ.ಎಸ್.ಟಿ. ದರವನ್ನು ಕಡಿಮೆ ಮಾಡುವುದು.

2. ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸುವುದು ಮತ್ತು ಸಾಮಾನ್ಯ ಜನರ ಖರ್ಚನ್ನು ಹೆಚ್ಚಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದು.

3. ಖಾಸಗಿ ಸಂಸ್ಥೆಗಳ ಎಲ್ಲಾ ಉದ್ಯೋಗಿಗಳಿಗೆ ಸರಕಾರದಿಂದಲೇ ಕನಿಷ್ಠ ಆರು ತಿಂಗಳುಗಳ ವೇತನವನ್ನು ನೀಡುವುದು

4. ಜನರಲ್ಲಿ ಖರ್ಚಿನ ಸಾಮರ್ಥ್ಯ ಹೆಚ್ಚಿಸಲು, ಹಣದ ಕೊರತೆ ಉಂಟಾದಲ್ಲಿ ಆರ್.ಬಿ.ಐ ಸಮ್ಮತಿಯೊಂದಿಗೆ ನೋಟ್‌ಗಳನ್ನು ಮುದ್ರಣ ಮಾಡಿ ಜನರಿಗೆ ಸಹಾಯ ಮಾಡಬಹುದು.

5. ಸಾರ್ವತ್ರಿಕ ಪಡಿತರ ವಿತರಣೆ ಕನಿಷ್ಠ ಆರು ತಿಂಗಳು ಮುಂದುವರಿಸಬೇಕು, ಐದು ಜನರಿರುವ ಒಂದು ಕುಟುಂಬಕ್ಕೆ ರೂ.10,000ದಂತೆ ಕನಿಷ್ಠ. 4 ತಿಂಗಳು ಪಾವತಿಸಬೇಕು(ಜನರಲ್ಲಿ ಹಣವಿದ್ದಾಗ ಖರ್ಚು ಮಾಡುವ ಶಕ್ತಿ ಹೆಚ್ಚುತ್ತದೆ. ಇದರಿಂದ ದೇಶದಲ್ಲಿನ ಎಲ್ಲಾ ರೀತಿಯ ವ್ಯವಹಾರವೂ ಹೆಚ್ಚುತ್ತದೆ).

6. ನಿರುದ್ಯೋಗ ಯುವಕರಿಗೆ ಕೊರೋನ ಮುಕ್ತವಾಗುವವರೆಗೂ ಅಥವಾ ಕನಿಷ್ಠ ಆರು ತಿಂಗಳವರೆಗೆ ನಿರುದ್ಯೋಗ ಭತ್ತೆಯನ್ನು ನೀಡುವುದು.

7. ಗ್ರಾಮೀಣ ಉದ್ಯೋಗ ಖಾತರಿಯನ್ನು ವಿಸ್ತರಿಸಬೇಕು ಮತ್ತು ನಗರದಲ್ಲಿಯೂ ಆರಂಭಿಸಬೇಕು.

8. ಕಾರ್ಮಿಕರ ಕಲ್ಯಾಣ ನಿಧಿಗೆ ಬಂದ ತೆರಿಗೆ ಹಣವನ್ನು ಶೀಘ್ರವಾಗಿ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಬಳಸುವುದು.

9. ವಲಸೆ ಕಾರ್ಮಿಕರ ವ್ಯಾಖ್ಯಾನವನ್ನು ವ್ಯಾಪಕಗೊಳಿಸಿ ಅದರಲ್ಲಿ ಐಟಿ, ಮೊಬೈಲ್ ರಿಪೇರಿ, ಹಣಕಾಸಿನ ಸೇವೆಗಳ ಕುರಿತಾದ ಕೆಲಸಗಳು ಮತ್ತು ಕೌಶಲ್ಯಾಧಾರಿತ ಇತರೆ ಉದ್ಯೋಗಗಳನ್ನು ಸೇರಿಸುವುದು.

10. ರಾಷ್ಟ್ರೀಯ ವಲಸೆ ಕಾರ್ಮಿಕರ ಆಯೋಗದಲ್ಲಿ ಸೂಕ್ತ ಬದಲಾವಣೆ ಮತ್ತು ಅಂತರ್ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಲ್ಲಿ ಮಾರ್ಪಾಡುಗಳನ್ನು ತರುವುದು.

11. ಎಲ್ಲಾ ಉದ್ಯೋಗದಾತರೂ ಬಾಕಿ ಉಳಿಸಿಕೊಂಡಿರುವ ವೇತನ ಮತ್ತಿತರ ಸೌಲಭ್ಯಗಳನ್ನು ತಕ್ಷಣವೇ ಪಾವತಿ ಮಾಡುವಂತೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಸರಕಾರದ ಜವಾಬ್ದಾರಿಯಲ್ಲಿ ಅವುಗಳನ್ನು ಕೊಡಿಸುವ ಕೆಲಸವಾಗಬೇಕು.

12. ಹೊಸ ನಿಯಮಾವಳಿ ರೂಪಿಸಿ, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಬೆಲೆ ನಿಗದಿ ಮಾಡಿ ಗ್ರಾಮ ಪಂಚಾಯತ್‌ಗಳ ಮುಖಾಂತರ ಸರಕಾರವೇ ಖರೀದಿ ಮಾಡಿ ರೈತರಿಗೆ ನೆರವಾಗಬೇಕು. ತ್ವರಿತವಾಗಿ ಪ್ರತಿ ಮತಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ವಲಸಿಗರನ್ನು ಲೆಕ್ಕ ಹಾಕಿ ಅವರಿಗೆ ಸೂಕ್ತ ಉದ್ಯೋಗದ ವ್ಯವಸ್ಥೆಯನ್ನು ಆಯಾ ವಿಧಾನಸಭೆ ಮತ್ತು ಲೋಕಸಭೆ ಮತಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಉಳಿಸಿ ಖಾಸಗೀಕರಣವನ್ನು ಕಡಿಮೆ ಮಾಡಬೇಕಿದೆ. ಆರ್ಥಿಕಶಾಸ್ತ್ರಜ್ಞ ಆಡಮ್ ಸ್ಮಿತ್ ಪ್ರಕಾರ ಸಮಸಮಾಜ ನಿರ್ಮಾಣವಾಗಬೇಕಾದರೆ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ರಾಜ್ಯವೇ ನಿರ್ವಹಿಸಬೇಕು. ಮನುಕುಲದ ಉಳಿವಿಗಾಗಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ಪ್ರಮುಖ ಅಂಶಗಳೆಂಬುದು ಎಲ್ಲಾ ಸಂದರ್ಭಗಳಲ್ಲಿ ಸಾರ್ವತ್ರಿಕ ಮತ್ತು ಅದನ್ನೇ ಪ್ರಪಂಚದ ಎಲ್ಲಾ ಮಹಾನ್ ದಾರ್ಶನಿಕರು ಪ್ರತಿಪಾದಿಸಿದ್ದು. ನಿಸರ್ಗಕ್ಕೆ ಮಾನವರೆಲ್ಲರೂ ಒಂದೇ ಎನ್ನುವ ಭಾವನೆ ಮತ್ತು ಅದನ್ನೇ ಅದು ಪ್ರಪಂಚದಾದ್ಯಂತ ಕೊರೋನದ ಮುಖಾಂತರವೂ ಹಣ, ಅಂತಸ್ತು, ಆಸ್ತಿ, ಅಧಿಕಾರ, ಲಿಂಗ, ಜಾತಿ, ವರ್ಣ, ಜನಾಂಗ, ದೇಶ, ಧರ್ಮವೆನ್ನದೇ ಪ್ರಮಾಣಿಸಿ ತೋರಿಸುತ್ತಿದೆ. ಭಾರತ ಈ ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಮಾಡಲಾಗದ ಬದಲಾವಣೆಯನ್ನು ಈಗ ಕೈಗೊಳ್ಳುವ ಸಕಾಲ ಒದಗಿ ಬಂದಿದೆ. ನಿಜವಾದ ಅರ್ಥದಲ್ಲಿ ಭಾರತ ತನ್ನ ನಾಗರಿಕರಿಗೆ ಸಂತೋಷದ ಜೀವನ ನೀಡುವಲ್ಲಿ ಸಫಲವಾಗಬೇಕಾದರೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.

Writer - ಡಾ.ಜಗನ್ನಾಥ ಕೆ. ಡಾಂಗೆ

contributor

Editor - ಡಾ.ಜಗನ್ನಾಥ ಕೆ. ಡಾಂಗೆ

contributor

Similar News