ತಿಳಿಸಾರಿನ ಪದ್ಯ

Update: 2020-06-22 19:30 GMT

ಸಾರುಗಳಲ್ಲಿ ಬಹಳ ಇಷ್ಟವಾದ ಸಾರು ಯಾವುದು ಅಂದರೆ ಬಹುತೇಕರಿಗೆ ಇಷ್ಟವಾದ, ಕಷ್ಟ ಕಾಲದಲ್ಲೂ ಕೈ ಹಿಡಿಯುವ ಸಾರು ‘ತಿಳಿಸಾರು’. ಸಪ್ಪೆ ಸಾರು, ಸೊಪ್ಪು ಸಾರು, ಪಲ್ಲೆಗಳ ಸಾರು, ಮಾಂಸದ ಸಾರು ಏನೆಲ್ಲಾ ತಿಂದರೂ ಈ ತಿಳಿಸಾರನ್ನು ಮಾತ್ರವೇ ಕುಡಿಯುವ ಮನಸ್ಸಾಗುವುದು. ಮಾಂಸಹಾರಿ ಹೋಟೆಲ್‌ಗಳಲ್ಲಿ ಅಥವಾ ಔತಣ ಕೂಟಗಳಲ್ಲಿ ಬಾಡೂಟ ಮುಗಿದ ಮೇಲೆ ತಿಳಿಸಾರಿನ ವಿತರಣೆ ಆಗಿಯೇ ಆಗುತ್ತದೆ. ಅದನ್ನು ತಪ್ಪಿಸುವಂತಿಲ್ಲ. ಇನ್ನು ಮನೆಗಳಲ್ಲಿ ಸಹ ಆಗಾಗ್ಗೆ ಸಮಾರಾಧನೆಗಳಲ್ಲಿ, ನಿತ್ಯದ ಜೀವನದ ಅಡುಗೆಗಳಲ್ಲಿ ತಿಳಿಸಾರು ಬೇಕೇಬೇಕು. ಈ ತಿಳಿಸಾರಿಗೆ ಹತ್ತಾರು ಅಡ್ಡ ಹೆಸರುಗಳು ಮತ್ತು ಅಡ್ಡ ರೆಸಿಪಿಗಳು. ರಸಂ, ಮೆಣಸಿನ ಸಾರು, ಜೀರಿಗೆ ಸಾರು ಇತ್ಯಾದಿಗಳ ಹೆಸರು, ರೂಪ, ಬಣ್ಣಗಳ ಜೊತೆಗೆ ಭೌಗೋಳಿಕ ಪ್ರದೇಶ, ಜಾತೀಯ ಸಂಸ್ಕೃತಿಗಳ ಮೇಲೂ ತಿಳಿಸಾರನ್ನು ಮಾಡುವ ವಿಧಾನಗಳು ಮತ್ತು ರುಚಿ ಬದಲಾಗುತ್ತವೆ. ಹಾಕುವ ಪದಾರ್ಥಗಳು, ಒಗ್ಗರಣೆ ಇತ್ಯಾದಿ ಕೂಡ ಭಿನ್ನವಾಗಿರುತ್ತವೆ.

‘ಆಹಾರ’ ಅನ್ನುವುದು ಯಾವಾಗಲೂ ಭಿನ್ನ ರುಚಿಯೇ. ತಿಳಿಸಾರು ಮಾಡಲು ವೆಜ್ಜೋ ನಾನ್ ವೆಜ್ಜೋ ಅನ್ನುವ ಯೋಚನೆಯ ಹಂಗಿಲ್ಲ, ಅದಕ್ಕೆ ಆ ಪದಾರ್ಥ ತಂದಿಲ್ಲ, ಇದು ಸಾಲುವುದಿಲ್ಲ ಅನ್ನುವ ಕೊರತೆಯಿಲ್ಲ. ಇದಕ್ಕೊಂದು ಪರಿಣತಿಬೇಕು ಅನ್ನುವ ಅಗತ್ಯವೂ ಇಲ್ಲ. ಇದೊಂದು ಸೀದಾ ಸಾದಾ ನೀರು ಸಾರು. ನಮ್ಮ ಅಡುಗೆಯ ಮತ್ತು ಹಸಿವಿನ ತುರ್ತಿಗೆ ಅಮೃತದಂತೆ ಒದಗಿಬರುವ ಸಾರು. ಎಷ್ಟೋ ದಿನಗಳ ತಡರಾತ್ರಿಯ ಊಟದಲ್ಲಿ ಅದೆಂತಹ ಮಸಾಲೆಯ ಸಾರುಗಳು ಇದ್ದರೂ ರಾತ್ರಿಯ ಚಳಿಯಲ್ಲಿ ಚೂರು ಬಿಸಿ ಮಾಡಿದ ತಿಳಿಸಾರನ್ನು ಅನ್ನದೊಂದಿಗೆ ಕಲಿಸಿ ಕೈ ಸೋರುವ ಹಾಗೆ ಮೊಗೆದು ತಿನ್ನುವುದು ಪರಮಾನಂದವೇ ಸರಿ. ಬಹುತೇಕ ನಾವೆಲ್ಲಾ ಅಂತಹ ಅನುಭವವನ್ನು ಪಡೆದವರೇ ಆಗಿರುತ್ತೇವೆ. ಇನ್ನು ಕಾಲದ ಲೆಕ್ಕದಲ್ಲಿ ನೋಡಿದರೂ ಮಳೆಗಾಲ ಮತ್ತು ಚಳಿಗಾಲಕ್ಕೆ ಹೇಳಿಮಾಡಿಸಿದ ಸಾರು ಇದು.

ಬೇಸಿಗೆಯಲ್ಲೂ ತಿನ್ನದೇ ಇರುವಂತಹದ್ದೇನಲ್ಲ. ಒಟ್ಟಿನಲ್ಲಿ ಅವರವರ ರುಚಿಗಳಿಗೆ ಹೊಂದಿಕೊಂಡು ಎಲ್ಲ ರೀತಿಯ ಆಹಾರಕ್ರಮಗಳ ಜನರ ಸರಳ ಮತ್ತು ಸಂತೃಪ್ತ ಸಾರಾಗಿರುವುದು ತಿಳಿಸಾರಿನ ಮಹತ್ವ. ಆಗಲೇ ಹೇಳಿದಂತೆ ತಿಳಿಸಾರು ಎಂಬುದು ನಾನಾ ತರಹದ್ದು. ಮಾಡುವವರ, ತಿನ್ನುವವರ ಅನುಕೂಲ ಮತ್ತು ರುಚಿಗೆ ಸೇರಿದ್ದು. ಕೆಲವರಿಗೆ ಬೇಳೆ ಹಾಕದೆ ಇರುವ ಸಾರು ಇಷ್ಟವಿಲ್ಲ, ಹಲವರಿಗೆ ಹುಳಿ ಹಾಕಿದ ಸಾರು ಇಷ್ಟ. ಇನ್ನು ಕೆಲವರಿಗೆ ಖಾರವೇ ಜಾಸ್ತಿ ಇರಬೇಕು; ಹೀಗೆ ಲೋಕವೇ ಭಿನ್ನರುಚಿ. ಇವುಗಳಲ್ಲಿ ಹಲವು ತಿಳಿಸಾರುಗಳು ಪುಡಿಯ ಮೇಲೆ ಅವಲಂಬಿತ. ಉಳಿದವು ಆಯಾ ಕ್ಷಣಕ್ಕೆ ಒದಗುವ ಪದಾರ್ಥಗಳ ಮೇಲೆ ತಯಾರು. ದನಿಯ, ಒಣಮೆಣಸಿನ ಕಾಯಿ, ಜೀರಿಗೆ, ಮೆಂತೆ, ಸಾಸಿವೆ, ಕಾಳು ಮೆಣಸು, ಅರಿಶಿನ, ಇಂಗುಗಳನ್ನು ಎಣ್ಣೆಯಲ್ಲಿ ಹದವಾಗಿ ಹುರಿದು ನಂತರ ತಣ್ಣಗಾದ ಮೇಲೆ ಅದನ್ನು ಮಿಕ್ಸಿ ಅಥವಾ ಪ್ಲೋರ್ ಮಿಲ್‌ನಲ್ಲಿ ಪುಡಿ ಮಾಡಿಟ್ಟುಕೊಂಡು ಬೇಕಾದಾಗ ಬೇಯಿಸಿದ ತೊಗರಿ ಬೇಳೆಯೊಂದಿಗೆ ಕುದಿಸಿ ಒಗ್ಗರಣೆ ಮಾಡಿಕೊಳ್ಳುತ್ತಾರೆ. ಇದೊಂದು ಸಿದ್ದ ಮಾದರಿಯ ವಿಧಾನ. ಬ್ರಾಹ್ಮಣರು ಹೆಚ್ಚು ಬಳಸುವ ಈ ವಿಧಾನದಲ್ಲಿ ಬೆಳ್ಳುಳ್ಳಿ ಬಳಕೆ ಇರುವುದಿಲ್ಲ. ಇತರರಿಗೆ ಬೆಳ್ಳುಳ್ಳಿ ಬಹಳ ಮುಖ್ಯ. ಅದರ ವಾಸನೆ ಮತ್ತು ಔಷಧೀಯ ಗುಣದಿಂದಾಗಿ ಅದನ್ನು ತಿಳಿಸಾರಿನಲ್ಲಿ ಸೇರಿಸಲೇಬೇಕು. ಅಂತಹವರು ಪುಡಿಯನ್ನು ಬಳಸಿದರೂ ಒಗ್ಗರಣೆಯಲ್ಲಿ ಬೆಳ್ಳುಳ್ಳಿಯ ಪಪ್ಪುಗಳನ್ನು ಬಳಸುತ್ತಾರೆ. ಇದರಲ್ಲಿಯೂ ಮೈಸೂರು, ಉಡುಪಿ, ತಮಿಳುನಾಡು ಅಂತೆಲ್ಲಾ ಬಗೆ ಬಗೆಯ ಭೌಗೋಳಿಕ ವಿಧಗಳುಂಟು.

ಇನ್ನು ಹಲವರಿಗೆ ಪುಡಿಯೆಲ್ಲಾ ಮಾಡಿಕೊಳ್ಳುವ ಸಿದ್ದತೆ ಇರುವುದಿಲ್ಲ. ಬೇಕು ಎನಿಸಿದಾಗ ಅಥವಾ ತತ್ ಕ್ಷಣಕ್ಕೆ ಮಾಡಲು ಹಸಿಯಾಗೇ ಪದಾರ್ಥಗಳನ್ನು ಹಾಕಿ ಬೇಯಿಸಿ ಕರಿಬೇವಿನ ಒಗ್ಗರಣೆ ಕೊಡುತ್ತಾರೆ. ಉದಾ: ಹುಣಸೆ ಅಥವಾ ಟೊಮೆಟೊ ತಿಳಿಸಾರು ಮಾಡುವಾಗ ಜೀರಿಗೆ, ಮೆಣಸು, ಬೆಳ್ಳುಳ್ಳಿಗಳನ್ನು ಅರೆದುಕೊಂಡು ಅಥವಾ ಜಜ್ಜಿಕೊಂಡು ಕರಿಬೇವು, ಸಾಸಿವೆ ಒಗ್ಗರಣೆ ಕೊಟ್ಟು ಅದರಲ್ಲಿ ಅರೆದ ಪದಾರ್ಥಗಳನ್ನೂ ಸ್ವಲ್ಪ ಹುರಿದು ನಂತರ ಟೊಮೆಟೊ/ ಹುಣಸೆ ರಸ ಸೇರಿಸಿ ನೀರು ಹಾಕಿ ಚೆನ್ನಾಗಿ ಬೇಯಿಸಿದರೆ ತಿಳಿಸಾರು ಸಿದ್ದವಾಗುತ್ತದೆ. ಹೀಗೆ ಮಾಡಿದ ತಿಳಿಸಾರಿನೊಂದಿಗೆ ನಿಂಬೆ ಅಥವಾ ಮಾವಿನ ಉಪ್ಪಿನಕಾಯಿ ಮತ್ತು ಉದ್ದಿನ ಹಪ್ಪಳ ತಿನ್ನುವುದು ಸೊಗಸಾಗಿರುತ್ತದೆ. ನಾವು ಊಟಕ್ಕೆ ಕೂಟಕ್ಕೆ ಮಾಡುವ ತಿಳಿಸಾರೆ ಒಂದಾದರೆ, ಮದ್ದಿಗೆ ಮಾಡುವ ತಿಳಿಸಾರೆ ಮತ್ತ್ತೂ ಭಿನ್ನವಾದುದು. ಮಕ್ಕಳು ಅಥವಾ ಹಿರಿಯರು ಮನೆಯಲ್ಲಿ ಕೆಮ್ಮಿದರೆ, ಕಫ ಇರುವಂತೆ ಅನಿಸಿದರೆ, ಶೀತ ಅಥವಾ ಜ್ವರದಿಂದ ನಾಲಗೆ ರುಚಿ ಕಳೆದುಕೊಂಡಿದ್ದರೆ ಅದಕ್ಕೆ ರಾಮಬಾಣ ಈ ತಿಳಿಸಾರು.

ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಬೇಯಿಸಿದ ಕರಿಬೇವು ಒಣಮೆಣಸಿನಕಾಯಿ ಒಗ್ಗರಣೆ ಕೊಟ್ಟ ಈ ಸಾರು ನಖಶಿಖಾಂತ ಉರಿ ಹತ್ತಿ ಕಟ್ಟಿರುವ ಮೂಗು ಬಿಡುವಂತೆ ನೀರು ಸುರಿದು ಮೈಯೆಲ್ಲಾ ಬೆವೆತು ಜ್ವರ ಬಿಟ್ಟು ಗಂಟಲಿಗೆ ಅಂಟಿದ ಕಫದಿಂದ ಮುಕ್ತಿ ಕೊಡಿಸುತ್ತದೆ. ನಾವು ಮಾಡುವ ಅಡುಗೆಗಳಲ್ಲಿ ಇದೊಂದೇ ನೋಡಿ ಔಷಧಿಯ ಸಾರು. ಇದನ್ನ್ನು ‘ಮೆಣಸಿನ ಸಾರು’ ಎಂದೂ ಕರೆಯುವುದುಂಟು. ಮನೆಗಳಲ್ಲಿ ಮಾಡುವ ತಿಳಿಸಾರು ಒಂದು ಬಗೆಯದಾದರೆ ದೇವಸ್ಥಾನಗಳಲ್ಲಿ ದಿಡ್ಡಿಯಾಗಿ ಮಾಡಿ ಬಡಿಸುವ ತಿಳಿಸಾರೇ ಮತ್ತೊಂದು ಬಗೆಯದ್ದು. ಇದರಲ್ಲಿ ಅಂತಹ ವಿಶೇಷವೇನೂ ಇರುವುದಿಲ್ಲ, ವಿಶೇಷವಿರುವುದು ಅದನ್ನು ಸೇವಿಸುವ ಭಕ್ತರಲ್ಲಿನ ನಂಬುಗೆಯಲ್ಲಿ. ಇಲ್ಲೂ ಕೂಡ ಮೊದಲೇ ಮಾಡಿಕೊಂಡಿರುವ ಅವರದೇ ಬಗೆಯ ತಿಳಿಸಾರಿನ ಪುಡಿಯನ್ನು ಬೆಲ್ಲದ ಜೊತೆಗೆ ಕುದಿಸಿ ನಂತರ ಒಗ್ಗರಣೆ ಹಾಕಲಾಗುತ್ತದೆ (ಇದರಲ್ಲಿ ಬೆಳ್ಳುಳ್ಳಿ ಬಳಸುವುದಿಲ್ಲ). ಉಡುಪಿ, ಧರ್ಮಸ್ಥಳ, ಕುಕ್ಕೆ ಮೊದಲಾದ ದೇವಳಗಳಲಿ ತಿಳಿಸಾರು ಪ್ರಸಾದ ರೂಪದಲ್ಲಿ ಸಿಗುತ್ತದೆ. ಸರದಿಯಲ್ಲಿ ಬಹಳ ಕಾಲ ನಿಂತು ಬರುವ ಭಕ್ತರಿಗೆ ಬಿಸಿಬಿಸಿ ಅನ್ನ ಅದರ ಮೇಲೆ ತಿಳಿಸಾರು ಬಿದ್ದಾಗ ಹೊರಡುವ ಘಮ ಲಗುಬಗೆಯಿಂದ ಊಟ ಮಾಡಲು ಪ್ರೇರೇಪಿಸುತ್ತದೆ. ಆ ಹೊತ್ತಿನ ಆನಂದವನ್ನು ಆ ಭಕ್ತನೊಬ್ಬನೇ ಬಲ್ಲ, ದೇವರಿಗೂ ಗೊತ್ತಿರಲಿಕ್ಕಿಲ್ಲ!

ಮಾಂಸದ ತಿಳಿಸಾರು ?!

ಇವರೇನು ಎಲ್ಲದಕ್ಕೂ ಮಾಂಸವನ್ನು ಸೇರಿಸುತ್ತಾರೆ ಎಂದು ಚಿಂತಿಸುವುದು ಬೇಡ. ಮಾಂಸ ನಮಗೆ ಬೇಕಾದ ಪೌಷ್ಟಿಕಾಂಶಗಳ ಆಗರ. ಹಾಗಾಗಿ ಯಾರಿಗೆ ಅಗತ್ಯವಿದೆಯೋ ಅವರು ಇಂಥಹ ಪ್ರಯೋಗಗಳನ್ನ್ನು ಮಾಡಿ ನೋಡಬಹುದು. ಅಡುಗೆಯ ಸೂತ್ರಗಳನ್ನು ಕಾಲ ಕಳೆದಂತೆ ನಾವು ಮುರಿಯಬೇಕು. ಅಂತಹ ಸೂತ್ರಗಳಿಗೆ ಆಯಾ ರಾಜಕೀಯಕಾಲದ ಪ್ರಭಾವದ ಸುಳಿಗಳಿರುತ್ತವೆ, ಅವುಗಳಿಂದ ಹೊರಗೆಳೆದು ಅವನ್ನು ಮುಕ್ತವಾಗಿಸಬೇಕು. ಮಾಂಸದ ತಿಳಿಸಾರು ಕೂಡ ಅಂತಹದೇ ಒಂದು ಪ್ರಯತ್ನ ಅಷ್ಟೇ. ಇದಕ್ಕೆ ನಾವು ಕೋಳಿ, ಮೀನು, ಹಂದಿ ಮಾಂಸವನ್ನು ಬಳಸಲು ಆಗುವುದಿಲ್ಲ, ಬಳಸಿದರೆ ಕುರಿಮಾಂಸವನ್ನೇ ಬಳಸಬೇಕು. ಆ ಮಾಂಸದ ವಾಸನೆ, ಅದರ ಬಣ್ಣ ಮತ್ತು ಟೆಕ್ಸ್ಚರ್‌ಗಳು ತಿಳಿಸಾರಿನೊಟ್ಟಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.

ಇದನ್ನು ಮಾಡುವ ವಿಧಾನ ಬಹಳ ಸುಲಭ. ಮೂಳೆಯಿರದ ಕುರಿ ಮಾಂಸವನ್ನು ಸಣ್ಣಗೆ ಹಚ್ಚಿಕೊಂಡು (ಕೈಮಾ ತರಹ ಅಲ್ಲ ಪೆಪ್ಪರ್ ಮೆಂಟಿನ ಆಕಾರಕ್ಕೆ) ಅದನ್ನು ಪ್ರತ್ಯೇಕವಾಗಿ ಅರಿಶಿನ, ಈರುಳ್ಳಿ, ಉಪ್ಪಿನಲ್ಲಿ ಹುರಿದುಕೊಂಡು ನಂತರ ಬೇಳೆ ಹಾಕಿಬೇಯಿಸದ ಮೆಣಸಿನ ಸಾರಿಗೆ ಹಾಕಿ ಚೆನ್ನಾಗಿಬೇಯಿಸುವುದು ( ಕುಕ್ಕರ್‌ನಲ್ಲಿ ಬೇಯಿಸಿದರೆ ಉತ್ತಮ). ಇದರ ರುಚಿ ಮತ್ತು ವಾಸನೆಯೇ ತುಂಬಾ ಬೇರೆಯ ತೆರದ್ದು. ಕುದಿಸುವಾಗ ಯಾವುದೇ ಕಾರಣಕ್ಕೂ ಇದು ಗಸಿಯಾಗ ಬಾರದು. ಹೆಸರಲ್ಲಿ ಇರುವಂತೆ ತಿಳಿಯಾಗೆ ಇರಬೇಕು. ಏನೇ ಮಾತಾಡಿದರೂ ಏನೇ ರುಚಿಗಳ ಬಗ್ಗೆ ವಿವರಣೆ ಕೊಟ್ಟರೂ ತಿಳಿಸಾರು ಒಂಥರಾ ಪದ್ಯದ ಹಾಗೆ ಯಾವ ಮಾತ್ರೆ, ಲಯ. ಗಣ ಪ್ರಸ್ತಾರ, ಛಂದಸ್ಸು ಹಾಕಿದರೂ ಅದಕ್ಕೆ ಹೊಂದಿಕೊಳ್ಳ್ಳುತ್ತೆ. ಆದರೆ ಅದಕ್ಕೆ ಇರುವ ಒಂದೇ ಷರತ್ತು ‘ತಿಳಿಯಾಗಿರುವುದು.’ ಘನವಾಗಿಸಿಬಿಟ್ಟರೆ ಅದರ ಘನತೆ ಕುಗ್ಗಿಹೋಗುತ್ತದೆ. ತಿಳಿ ಎಷ್ಟರಮಟ್ಟಿಗೆ ಎಂದರೆ ನಮ್ಮ ಮೈಮನಸುಗಳು ಅದನ್ನು ಕುಡಿದೊಡನೆ ಉಲ್ಲಾಸಗೊಳ್ಳುವ ಹಾಗೆ. ಇದನ್ನು ಬರೀ ‘ಸಾರು’ ಎಂದು ಗುರುತಿಸುವುದು ಕಷ್ಟ. ಇದೊಂದು ಪಾನೀಯ ಕೂಡ ಆಗಿಬಿಟ್ಟಿದೆ. ಅನ್ನದ ಜೊತೆಗೆ ತಿನ್ನುತ್ತಿದ್ದರೂ ಅದು ಕೈಯಿಂದ ಸೋರಿ ತಟ್ಟೆಗೆ ಬೀಳುವ ಪರಿ ನೋಡಿದರೆ ಅರ್ಥವಾದೀತು. ಹುಳಿ-ಸಿಹಿ-ಖಾರಗಳ ಸಮ್ಮಿಲನದ ಈ ತಿಳಿಸಾರು ಎಲ್ಲ ಜನರ, ಎಲ್ಲ ಕಾಲದ ಮನೆಮದ್ದು.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News