ಹೆಚ್ಚುತ್ತಿರುವ ಕೊರೋನ ಸೋಂಕು: ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 484ಕ್ಕೆ ಏರಿಕೆ

Update: 2020-06-23 12:37 GMT

ಬೆಂಗಳೂರು, ಜೂ.23: ನಗರದಲ್ಲಿ ಲಾಕ್‍ಡೌನ್ ಸಡಿಲಿಕೆ ನಂತರ ಕೊರೋನ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಕಂಟೈನ್ಮೆಂಟ್ ಝೋನ್‍ ಗಳನ್ನು ಬಿಬಿಎಂಪಿ ಏರಿಕೆ ಮಾಡಿದೆ.

ಸೋಮವಾರ 146 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 484 ಕಂಟೈನ್ಮೆಂಟ್ ಝೋನ್‍ಗಳನ್ನು ಸ್ಥಾಪಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳ ಪೈಕಿ ಬಹುತೇಕ ಎಲ್ಲಾ ವಾರ್ಡ್ ಗಳಲ್ಲೂ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಕೊರೋನ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಸೋಮವಾರ ಬೆಳಗ್ಗೆ ಮೇಯರ್ ಗೌತಮ್‍ ಕುಮಾರ್ ಸ್ವತಃ ತಾವೇ ಕೆ.ಆರ್.ಮಾರುಕಟ್ಟೆಗೆ ಆಗಮಿಸಿ ಸೀಲ್‍ಡೌನ್ ಆಗಿರುವುದರಿಂದ ಮಳಿಗೆ ತೆರೆಯದಂತೆ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಬೀದಿ ಬದಿಯ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲೇಬಾರದು ಎಂದು ಸೂಚಿಸಿ, ಕೆಲ ಬೀದಿ ಬದಿ ವ್ಯಾಪಾರಿಗಳನ್ನು ವಾಪಸ್ ಕಳುಹಿಸಿದ್ದಾರೆ.

ತಪ್ಪಿತಸ್ಥರಿಗೆ ಎನ್.ಡಿ.ಎಂ.ಎ ಅಡಿ ಪ್ರಕರಣ ದಾಖಲು

ನಗರದ ಹೆಚ್ಚು ಕೊರೋನ ಪ್ರಕರಣಗಳು ಕಂಡು ಬಂದಿರುವ ಐದು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಮುಂಜಾನೆಯಿಂದಲೇ ಆಯಾ ಪ್ರದೇಶದ ಪೊಲೀಸ್ ಠಾಣೆಯ ಸಿಬ್ಬಂದಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಅನಗತ್ಯ ಓಡಾಟ ಮಾಡುವವರ ಮೇಲೆ ಕಣ್ಣಿಟ್ಟಿದ್ದಾರೆ. ಸೀಲ್ ಡೌನ್ ಆದ ಸಿದ್ದಾಪುರ, ವಿ.ವಿ ಪುರಂ, ಚಿಕ್ಕಪೇಟೆ, ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯ ಪ್ರದೇಶಗಳಲ್ಲಿ ಮಾಸ್ಕ್ ಹಾಕದೇ ವಿನಾಕಾರಣ ಓಡಾಟ ಮಾಡಿದರೆ ಅವರ ವಿರುದ್ಧ ಸಂಬಂಧಪಟ್ಟ ಠಾಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ(ಎನ್‍ಡಿಎಂಎ)ಯಡಿ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿದೆ.

ಈಗಾಗಲೇ ಸೀಲ್ ಡೌನ್ ಆಗಿರುವ ಐದು ಪ್ರದೇಶಗಳಲ್ಲಿ ಅತೀ ಹೆಚ್ಚಿನ ಕೊರೋನ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯ ಠಾಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಗಸ್ತು ತಿರುಗಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಹಿರಿಯ ಅಧಿಕಾರಿಗಳು ಕೂಡ ಆದಷ್ಟು ಜಾಗೃತಿಯಿಂದ ಕೆಲಸ ನಿರ್ವಹಣೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಚಿಕ್ಕಪೇಟೆಯಲ್ಲಿ ಭೀತಿ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ ನಲ್ಲೂ ಕೊರೋನ ಕಾಣಿಸಿಕೊಳ್ಳುತ್ತಿವೆ. 7 ವಾರ್ಡ್ ಗಳಲ್ಲಿ 120 ಕೊರೋನ ಸೋಂಕಿತರಿದ್ದು ಇವರಲ್ಲಿ ಮೂವರಿಗೆ ಮಾತ್ರ ಅಂತರ್ ರಾಜ್ಯ ಪ್ರವಾಸದ ಹಿನ್ನಲೆ ಇದ್ದರೆ ಉಳಿದವರಿಗೆ ಸೋಂಕು ಹರಡಲು ಕಾರಣ ಏನು ಎಂಬುದೇ ತಿಳಿಯುತ್ತಿಲ್ಲ. 48 ಸೋಂಕಿತರಿಗೆ ಯಾವುದೇ ಟ್ರಾವೆಲ್ ಹಿನ್ನಲೆ ಇಲ್ಲದಿದ್ದರೂ ಸೋಂಕು ಹರಡಿದ್ದು ಹೇಗೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಸೋಂಕಿನ ಮೂಲ ಪತ್ತೆ ಹಚ್ಚುವ ಉದ್ದೇಶದಿಂದ ಇಡೀ ಕ್ಷೇತ್ರವನ್ನು ಬಿಬಿಎಂಪಿ ಲಾಕ್‍ಡೌನ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News