ಬೆಂಗಳೂರು: ಎಟಿಎಂಗೆ ಸ್ಕೀಮರ್ ಅಳವಡಿಸಿ ಹಣ ದೋಚುತ್ತಿದ್ದ ಆರೋಪ; ವಿದೇಶಿ ಪ್ರಜೆಗಳಿಬ್ಬರ ಬಂಧನ

Update: 2020-06-23 12:46 GMT

ಬೆಂಗಳೂರು, ಜೂ.23: ಎಟಿಎಂ ಯಂತ್ರಗಳಿಗೆ ಸ್ಕೀಮರ್ ಮಿಷನ್ ಅಳವಡಿಸಿ ಗ್ರಾಹಕರ ಡೇಟಾವನ್ನು ಕಳವು ಮಾಡಿ ನಕಲಿ ಎಟಿಎಂಗಳ ಮೂಲಕ ಹಣ ಕಸಿದುಕೊಳ್ಳುತ್ತಿದ್ದ ವಿದೇಶಿ ಪ್ರಜೆಗಳಿಬ್ಬರನ್ನು ಇಲ್ಲಿನ ಉತ್ತರ ವಿಭಾಗದ ಆರ್‍ಟಿನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಗಾಂಡ ದೇಶದ ಫೆಲಿಕ್ಸ್ ಕಿಸಿಬೊ(25) ಹಾಗೂ ಟೆಂಝಾನಿಯಾ ದೇಶದ ಖೈರುನ್ ಅಬ್ದುಲ್ಲಾ(32) ಬಂಧಿತ ಆರೋಪಿಗಳಾಗಿದ್ದು, ಇವರು ನಗರದ ಕೋಗಿಲು ಕ್ರಾಸ್ ಬಳಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರ್‍ಟಿ ನಗರದ ಯೂನಿಯನ್ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿದ್ದ ಈ ಇಬ್ಬರು ವಿದೇಶಿಗರು, ಕೈನಲ್ಲಿ ಸ್ಕೀಮರ್ ಮಿಷಿನ್ ಹಾಗೂ ಹಲವಾರು ಎಟಿಎಂ ಕಾರ್ಡ್‍ಗಳನ್ನು ಹಿಡಿದುಕೊಂಡು ಹಣವನ್ನು ಡ್ರಾ ಮಾಡುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಎಟಿಎಂನ ಉಸ್ತುವಾರಿ ಉಮಾಮಹೇಶ್ವರ್ ರನ್ನು ಕಂಡ ಆರೋಪಿಗಳು ಗಾಬರಿಯಿಂದ ಹೊರ ಹೋಗಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ ಅವರು ಜೂ.18ರಂದು ಆರ್‍ಟಿನಗರದ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ಇದರ ಅನ್ವಯ ಐ.ಟಿ. ಆಕ್ಟ್ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಿವಿಧ ಬ್ಯಾಂಕ್ ನ 12 ಎಟಿಎಂ ಕಾರ್ಡ್‍ಗಳು, 3 ಮೊಬೈಲ್ ಫೋನ್‍ ಗಳು, 1 ಲ್ಯಾಪ್‍ಟಾಪ್, ಸ್ಕೀಮರ್ ಮಿಷನ್(ಬೆಸ್), ಲೋಡರ್, ಹಿಡನ್ ಕ್ಯಾಮರಾ ಜಪ್ತಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News