ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ದೇಶ ಕಂಡಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-06-23 16:46 GMT

ಬೆಂಗಳೂರು, ಜೂ. 23: ಕೇಂದ್ರದ ಮೋದಿ ನೇತೃತ್ವದ ಸರಕಾರ ಕೋವಿಡ್-19 ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ದೇಶದ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದೆ. ಈ ಸತ್ಯವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ದೇಶ ಕಂಡಿಲ್ಲ. ಇಷ್ಟು ಮೋಸ ಮಾಡಿದವರನ್ನು ನೋಡಿಲ್ಲ ಎಂದು ಟೀಕಿಸಿದರು.

ಜನವರಿ 24ಕ್ಕೆ ಕೇರಳದಲ್ಲಿ ಮೊದಲ ಬಾರಿಗೆ ಕೊರೋನ ಸೋಂಕು ಕಾಣಿಸಿಕೊಂಡಿತ್ತು. ಮಾರ್ಚ್ 24ರಂದು ಲಾಕ್‍ಡೌನ್ ಘೋಷಣೆ ಮಾಡಲಾಯಿತು. ಜನರ ಜೀವ ಹೋಗುತ್ತಿದ್ದರೂ, ಗಂಟೆ ಹೊಡೆಯಿರಿ, ದೀಪ ಹಚ್ಚಿ ಎಂದು ಭಾವನಾತ್ಮಕ ರಾಜಕಾರಣ ಮಾಡಿದರು. ಅನಂತರ 70 ದಿನ ಲಾಕ್‍ಡೌನ್ ಮಾಡಲಾಯಿತು. ವಾಸ್ತವದಲ್ಲಿ ಇದೀಗ ಲಾಕ್‍ಡೌನ್ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವವರಿಗೆ ಸೋಂಕು ತಗುಲಿದೆ. ಪ್ರತಿ ನಿತ್ಯವೂ ಸೋಂಕು ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದವರ ಕುಟುಂಬದ ಸದಸ್ಯರಿಗೆ ಸೋಂಕು ತಗಲಿದೆ. ಇದರಿಂದ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸರಕಾರ ಸೋಂಕು ನಿಯಂತ್ರಣಕ್ಕೆ ಏನು ಮಾಡುತ್ತಿಲ್ಲ ಎಂದು ದೂರಿದರು.

ಬಿಜೆಪಿ ಸರಕಾರ ಎಲ್ಲದರಲ್ಲಿಯೂ ಕೋಮುವಾದ ಹುಡುಕುತ್ತಿದ್ದು, ತನ್ನ ರಾಜಕೀಯ ಲಾಭಕ್ಕೆ ಮುಂದಾಗುತ್ತಿದೆ. ಕೊರೋನ ಸೋಂಕು ಹರಡಲು ತಬ್ಲೀಘಿಗಳ ಹೆಸರನ್ನು ಮುಂದಿಟ್ಟುಕೊಂಡು ಕೋಮುವಾದ ಮಾಡಲಾಯಿತು. ಇದೀಗ ವಾಸ್ತವ ದೇಶದ ಜನರಿಗೆ ಗೊತ್ತಾಗಿದೆ ಎಂದು ಸಿದ್ದರಾಮಯ್ಯ, ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುವ ಮೂಲಕ ವಿಪಕ್ಷಗಳನ್ನು ಬೆದರಿಸುವ ಕೆಲಸಕ್ಕೆ ಮುಂದಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಮಾಧ್ಯಮಗಳಿಗೂ ನೋಟಿಸ್ ನೀಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇಲ್ಲದ ಸ್ಥಿತಿ ಇದೆ ಎಂದು ಟೀಕಿಸಿದರು.

ಜುಲೈ 2ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್ ಹಾಗೂ ಸತೀಶ್ ಜಾರಕಿಹೊಳಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪದಗ್ರಹಣ ಕಾರ್ಯಕ್ರಮಕ್ಕೆ ಸರಕಾರ ಇದೀಗ ಅವಕಾಶ ನೀಡಿದ್ದು, ವಿನೂತನ ರೀತಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಸಲು ಸಿದ್ದತೆ ನಡೆಯುತ್ತಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ವೈಭವಿಕರಿಸಲು ಪದಗ್ರಹಣ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ಬದಲಿಗೆ ಪಕ್ಷದ ಕಾರ್ಯಕರ್ತರಿಗೆ ಮತ್ತು ಪದಾಧಿಕಾರಿಗಳು, ಮುಖಂಡರಿಗೆ ನವಚೈತನ್ಯ ತುಂಬಲು ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಬೇರೆ ಯಾವುದೇ ಪಕ್ಷ ಇಂತಹ ಕಾರ್ಯಕ್ರಮ ಮಾಡಿಲ್ಲ

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News