ಪೊಲೀಸರಿಗಾಗಿ ಐದು ಖಾಸಗಿ ಆಸ್ಪತ್ರೆ ಕಾಯ್ದಿರಿಸಿ: ಗೃಹ ಸಚಿವ ಬೊಮ್ಮಾಯಿ ಆದೇಶ

Update: 2020-06-23 18:04 GMT

ಬೆಂಗಳೂರು, ಜೂ.23: ಕೋವಿಡ್-19 ಸಂಬಂಧ ಪೊಲೀಸ್ ಇಲಾಖೆಯ ಸಿಬ್ಬಂದಿಗಾಗಿ ಐದು ಖಾಸಗಿ ಆಸ್ಪತ್ರೆಗಳನ್ನು ಕಾಯ್ದಿರಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ಮಂಗಳವಾರ ಈ ಆದೇಶ ಹೊರಡಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಹಾಗೂ ಲಾಕ್‍ಡೌನ್ ಕಾರ್ಯಗಳನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ನಡುವೆ ಇಲಾಖೆಯ ಹಲವು ಸಿಬ್ಬಂದಿ ಹಾಗೂ ಅಧಿಕಾರಿಗಳು ಕೋವಿಡ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಪೊಲೀಸ್ ಇಲಾಖೆಯ ಆತ್ಮವಿಶ್ವಾಸವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಮತ್ತು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಮತ್ತೇ ತೊಡಗಿಸಿಕೊಳ್ಳುವಂತಾಗಲು ಗೃಹ ಇಲಾಖೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಅವರು ಹೇಳಿದ್ದಾರೆ.

ಆದೇಶದ ಪ್ರಮುಖ ಅಂಶ...!

* ನಗರದಲ್ಲಿ ಪೊಲೀಸ್ ಸಿಬ್ಬಂದಿಗಾಗಿ 5 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಪಾಸಿಟಿವ್ ರೋಗಿಗಳಿಗೆ ಕಾಯ್ದಿರಿಸುವುದು.

* ಪೊಲೀಸ್ ಸಿಬ್ಬಂದಿಗಳಿಗೆ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವುದು.

* ಆಸ್ಪತ್ರೆಯಲ್ಲಿ ದಾಖಲಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಉತ್ತಮವಾದ ಊಟ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು

* ಸಿಬ್ಬಂದಿಗಾಗಿ ಪ್ರತ್ಯೇಕವಾಗಿ ಒಂದು ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಹಾಗೂ ಗಂಟಲು ದ್ರವ ಸಂಗ್ರಹಿಸಿದ ಸಂಚಾರಿ ವಾಹನವನ್ನು ಕಾಯ್ದಿರಿಸುವುದು

* ಪ್ರತ್ಯೇಕವಾಗಿ ಪೊಲೀಸ್ ಸಿಬ್ಬಂದಿಗಾಗಿ ಒಂದು ಕ್ವಾರಂಟೈನ್ ಸೆಂಟರ್ ನಿಗದಿಪಡಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News