×
Ad

ಕೈಗಾರಿಕೆಗಳಲ್ಲಿ ಹೂಡಿಕೆ: ತೈವಾನ್ ಅಧಿಕಾರಿಗಳ ಜತೆ ಡಿಸಿಎಂ ಮಾತುಕತೆ

Update: 2020-06-23 23:45 IST

ಬೆಂಗಳೂರು, ಜೂ.23: ಕೋವಿಡ್ ನಂತರ ರಾಜ್ಯದಲ್ಲಿ ಬಂಡವಾಳ ಹೂಡಲು ತೈವಾನ್ ಕೈಗಾರಿಕೋದ್ಯಮಿಗಳು ಉತ್ಸಾಹ ತೋರುತ್ತಿದ್ದು, ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ, ಆ ದೇಶದ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ನಗರದಲ್ಲಿ ಮಂಗಳವಾರ ತೈವಾನ್ ಆರ್ಥಿಕ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಜಾಸನ್ ತ್ಸು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಕರ್ನಾಟಕವು ಕೊರೋನೋತ್ತರ ಕಾಲದಲ್ಲಿ ಹೂಡಿಕೆ ಮಾಡಲು ಪ್ರಶಸ್ತ್ಯವಾಗಿದ್ದು ಉದ್ಯಮಸ್ನೇಹಿ ವಾತಾವರಣ ಮತ್ತು ಕೈಗಾರಿಕಾಪೂರಕ ನೀತಿಯನ್ನು ಹೊಂದಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಮಾತುಕತೆ ಹಂತದಲ್ಲಿಯೇ ಹೂಡಿಕೆ ಬಗ್ಗೆ ಒಲವು ತೋರಿದ ತೈವಾನ್ ಅಧಿಕಾರಿಗಳು, ಜಪಾನ್ ಉದ್ಯಮಿದಾರರಿಗೆ ತುಮಕೂರು ಬಳಿ ಪ್ರತ್ಯೇಕ ಟೌನ್‍ಶಿಪ್ ಕಟ್ಟಿಕೊಟ್ಟಂತೆಯೇ ನಮ್ಮ ಉದ್ಯಮಿದಾರರಿಗೂ ಪ್ರತ್ಯೇಕವಾದ ಟೌನ್‍ಶಿಪ್ ನಿರ್ಮಿಸಿಕೊಡಿ. ಇದರಿಂದ ನಮ್ಮ ಹೂಡಿಕೆದಾರರು ಹೆಚ್ಚುಹೆಚ್ಚಾಗಿ ಉತ್ತೇಜಿತರಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದಾರೆಂದು ಉಪ ಮುಖ್ಯಮಂತ್ರಿಯ ಗಮನ ಸೆಳೆದರು.

ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿ, ತೈವಾನ್ ಟೌನ್‍ಶಿಪ್ ನಿರ್ಮಿಸುವ ಬಗ್ಗೆ ಆದಷ್ಟು ಬೇಗ ನಮ್ಮ ಕೈಗಾರಿಕೆ ಸಚಿವರ ಜತೆ ಮಾತುಕತೆ ನಡೆಸಲಾಗುವುದು. ರಾಜ್ಯದ ಕೈಗಾರಿಕಾಭಿವೃದ್ಧಿ ಮಂಡಳಿಯೆ ಅದನ್ನು ಅಭಿವೃದ್ಧಿ ಮಾಡಿಕೊಡಲಿದೆ ಎಂದು ತೈವಾನ್ ಅಧಿಕಾರಿಗಳಿಗೆ ಭರವಸೆ ನೀಡಿದರು.

ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರಕ್ರಿಯೆಗಳು ತುಂಬಾ ಸುಲಭ. ಭೂ ಸ್ವಾಧೀನ ಪ್ರಕ್ರಿಯೆಗಳು ಸರಳವಾಗಿವೆ. ಉದ್ದಿಮೆದಾರರು ತಮಗೆಲ್ಲಿ ಅನುಕೂಲವಾಗುತ್ತದೋ ಅಲ್ಲಿ ಭೂಮಿ ನೀಡಲಾಗುವುದು. ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ತೈವಾನ್ ದೇಶದಿಂದ ಗರಿಷ್ಠ ಹೂಡಿಕೆಯನ್ನು ಕರ್ನಾಟಕ ನಿರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.

ಎಲ್‍ಇಡಿ, ಮೊಬೈಲ್ ಮುಂತಾದ ಕ್ಷೇತ್ರಗಳಲ್ಲಿ ಕ್ಲಸ್ಟರ್ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಒಲವು ತೋರಿದ ತೈವಾನ್ ನಿಯೋಗವು, ಅದರಲ್ಲೂ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ತೈವಾನೀಯರು ಉತ್ಸುಕರಾಗಿದ್ದಾರೆ ಎಂದಾಗ ಅದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಜತೆಗೆ, ಎಲೆಕ್ಟ್ರಾನಿಕ್ ವಲಯದಲ್ಲಿ ಕರ್ನಾಟಕ ಮತ್ತು ತೈವಾನ್ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು.

ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವಿದೆ. ಅದಕ್ಕೆ ಪೂರಕವಾದ ಸರಪಳಿಯೂ ಬಲಿಷ್ಠವಾಗಿದೆ. ಈ ನಿಟ್ಟಿನಲ್ಲಿ ತೈವಾನ್ ಹೂಡಿಕೆದಾರರಿಗೆ ಸರ್ವರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ಅಶ್ವಥ್ ನಾರಾಯಣ ಭರವಸೆ ನೀಡಿದರು.

ಟಿಈಸಿಸಿ ಕೇಂದ್ರ ಸ್ಥಾಪಿಸಿ: ರಾಜಧಾನಿ ಬೆಂಗಳೂರಿನಲ್ಲಿ ತೈವಾನ್ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ (ಟಿಈಸಿಸಿ) ಸ್ಥಾಪಿಸುವಂತೆ ಉಪ ಮುಖ್ಯಮಂತ್ರಿ ತೈವಾನ್ ಅಧಿಕಾರಗಳನ್ನು ಕೋರಿದರು. ಅದಕ್ಕೆ ಕೇಂದ್ರ ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಡಿಸಿಎಂ ಜತೆ, ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರೆ, ತೈವಾನ್ ಕಡೆಯಲ್ಲಿ ಟಿಈಸಿಸಿಯ ವಿಜ್ಞಾನ ತಂತ್ರಜ್ಞಾನ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಚಿನ್ ತ್ಸಾನ್ ವಾಂಗ್, ಟಿಈಸಿಸಿ ಆರ್ಥಿಕ ವಿಭಾಗದ ಮುಖ್ಯಸ್ಥ ಫಿಲ್ ಚಾಂಗ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News