ಕೋವಿಡ್-19 ವರದಿ ನೆಗೆಟಿವ್: ಐಎಎಸ್ ಅಧಿಕಾರಿ ಬಿ.ಎಂ.ವಿಜಯಶಂಕರ್ ಅಂತ್ಯಕ್ರಿಯೆ
ಬೆಂಗಳೂರು, ಜೂ.24: ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಬಿ.ಎಂ.ವಿಜಯಶಂಕರ್(59) ನಿನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬುಧವಾರ ಅವರ ಮೃತದೇಹವನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದ ಬಳಿಕ ಅಂತ್ಯಕ್ರಿಯೆ ಜರುಗಿಸಲಾಯಿತು.
ಮಂಗಳವಾರ ಜಯನಗರದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಜಯಶಂಕರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆ ರವಾನೆ ಮಾಡಲಾಯಿತು. ನಂತರ, ಕೊರೋನ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದ ಹಿನ್ನೆಲೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ಬುಧವಾರ ಅವರ ಮನೆಯ ಬಳಿ ಜಮಾವಣೆಗೊಂಡ ಕುಟುಂಬಸ್ಥರು, ಅಧಿಕಾರಿಗಳು ಹಾಗೂ ಅವರ ಸ್ನೇಹಿತರು ವಿಜಯಶಂಕರ್ ಅವರ ಅಂತಿಮ ದರ್ಶನ ಪಡೆದರು. ನಂತರ, ಧಾರ್ಮಿಕ ವಿಧಿ-ವಿಧಾನಗಳಂತೆ ಸಂಜೆ ಹೊತ್ತಿಗೆ ನಗರದ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ಜರುಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಾವಿಗೆ ಕಾರಣ ಗೊತ್ತಿಲ್ಲ: ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಜಿ ಬೆಂಗಳೂರು ಜಿಲ್ಲಾಧಿಕಾರಿ, ಹಾಲಿ ಸಕಾಲ ಇಲಾಖೆಯ ನಿರ್ದೇಶಕರೂ ಆಗಿದ್ದ ಬಿ.ಎಂ. ವಿಜಯ್ ಶಂಕರ್ ಅವರ ಸಾವಿನ ಕಾರಣ ತಿಳಿದುಬಂದಿಲ್ಲ ಹಾಗೂ ಘಟನೆ ಕುರಿತು ವಿವರ ಸಹಿತ ಮೈಕೋ ಲೇಔಟ್ ಎಸಿಪಿಗೆ ಕುಟುಂಬಸ್ಥರು ಲಿಖಿತ ದೂರು ನೀಡಿದ್ದಾರೆ.
ವಿಜಯಶಂಕರ್ ಸಹೋದರ, ಪತ್ನಿ ಹಾಗೂ ಪುತ್ರಿ ದೂರಿನ ಪ್ರತಿಯಲ್ಲಿ ಸಹಿ ಮಾಡಿದ್ದು, ಈ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ದೂರ ಉಳಿದ ಹಿರಿಯರು !
ಮತ್ತೊಂದೆಡೆ ವಿಜಯಶಂಕರ್ ಅವರ ಸಾವಿನ ಕುರಿತು ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡದ ಪೊಲೀಸರ ನಡೆ ಗೊಂದಲಕ್ಕೆ ಕಾರಣವಾಗಿದೆ. ಹಿರಿಯ ಐಎಎಸ್ ಅಧಿಕಾರಿ ಸಾವನ್ನಪ್ಪಿದ್ದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಸಹ ಘಟನಾ ಸ್ಥಳದ ಕಡೆ ಮುಖ ಮಾಡಿಲ್ಲ ಎಂದು ತಿಳಿದುಬಂದಿದೆ.
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಪ್ರಕರಣ ಬೆಳಕಿಗೆ ಬಂದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳ ಮಹಜರು ಹಾಗೂ ಇತರೆ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೂ ಯಾವುದೇ ಮಾಹಿತಿ ನೀಡದೆ, ಹೊರಟರು ಎಂದು ಹೇಳಲಾಗುತ್ತಿದೆ.
ತನಿಖೆ ಬಳಿಕ ಗೊತ್ತಾಗಲಿದೆ
ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆಯ ನಂತರ ಎಲ್ಲವೂ ಗೊತ್ತಾಗಲಿದೆ. ಸದ್ಯ ಆತ್ಮಹತ್ಯೆಯನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಐಎಂಎ ವಂಚನೆ ಪ್ರಕರಣ ತಳುಕು ಹಾಕುವುದು ಸರಿಯಲ್ಲ, ಅದು ಹಳೆಯ ಪ್ರಕರಣ. ಆತ್ಮಹತ್ಯೆ ಪ್ರಕರಣದ ತನಿಖೆ ನಡೆದ ನಂತರ ವಾಸ್ತವಾಂಶ ಬಹಿರಂಗವಾಗಲಿದೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ