ಅಪಾರ್ಟ್ ಮೆಂಟ್ ನಲ್ಲಿ ಶ್ವಾನ, ಬೆಕ್ಕು ನಿರ್ಬಂಧ ವಿಚಾರ: ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಬೆಂಗಳೂರು, ಜೂ.24: ಅಪಾರ್ಟ್ ಮೆಂಟ್‍ನಲ್ಲಿ ಬಾಡಿಗೆ ಹಾಗೂ ಭೋಗ್ಯಕ್ಕೆ ಇರುವವರು ಶ್ವಾನ ಹಾಗೂ ಬೆಕ್ಕುಗಳನ್ನು ತರುವುದನ್ನು ನಿರ್ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಅರ್ಜಿಗೆ ಉತ್ತರಿಸಲು ಸರಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಅಪಾರ್ಟ್ ಮೆಂಟ್‍ನಲ್ಲಿ ಶ್ವಾನ ಹಾಗೂ ಬೆಕ್ಕುಗಳ ಸಾಕುವಿಕೆಯನ್ನು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕಂಪ್ಯಾಷನ್ ಅನ್‍ಲಿಮಿಟೆಡ್ ಪ್ಲಸ್ ಆ್ಯಕ್ಷನ್(ಕ್ಯುಪಾ) ಸಂಘಟನೆಯ ಸದಸ್ಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಸಾಕು ನಾಯಿ, ಬೆಕ್ಕುಗಳ ಪಾಲನೆ ಬಗ್ಗೆ ಮಾರ್ಗಸೂಚಿ ಇದೆ. ಆದರೆ ಆ ಮಾರ್ಗಸೂಚಿಗಳನ್ನು ಇವರು ಪಾಲನೆ ಮಾಡುತ್ತಿಲ್ಲ. ಬಾಡಿಗೆ ಹಾಗೂ ಭೋಗ್ಯಕ್ಕೆ ಬರುವವರಿಗೆ ಕಾರಣವಿಲ್ಲದೇ ಅಪಾರ್ಟ್‍ಮೆಂಟ್ ಮಾಲಕರು ಕಿರಿಕಿರಿ ಮಾಡತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗೆ ಉತ್ತರಿಸಲು ಕಾಲಾವಕಾಶ ನೀಡಲು ಸರಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿತು.
ಉದ್ಯಾನನಗರಿಯಲ್ಲಿ ಸುಮಾರು 1.25 ಲಕ್ಷ ಸಾಕು ನಾಯಿಗಳಿದ್ದು, ಈ ಪೈಕಿ ಒಂದು ಸಾವಿರ ನಾಯಿಗಳಿಗೆ ಮಾಲಕರು ಪರವಾನಗಿ ಪಡೆದುಕೊಂಡಿದ್ದಾರೆ. ನೂತನ ಬೈಲಾ ಪ್ರಕಾರ ಪರವಾನಗಿ ಪಡೆಯಲು ಮಾಲಕರು ತಮ್ಮ ಸ್ವಂತ ವೆಚ್ಚದಲ್ಲಿ ಶ್ವಾನಗಳಿಗೆ ಮೈಕ್ರೋ ಚಿಪ್ ಅಳವಡಿಸಿರಬೇಕು. ಅಲ್ಲದೆ, ರೋಗ ನಿರೋಧ ಲಸಿಕೆ ಹಾಕಿಸಬೇಕು.