×
Ad

ಒಬ್ಬ ವಿದ್ಯಾರ್ಥಿಗೂ ಸೋಂಕು ತಗುಲದಂತೆ ಎಚ್ಚರವಹಿಸಿ: ಸಚಿವ ಸುಧಾಕರ್

Update: 2020-06-24 22:04 IST

ಬೆಂಗಳೂರು, ಜೂ.24: ಒಬ್ಬ ವಿದ್ಯಾರ್ಥಿಗೂ ಕೊರೋನ ಸೋಂಕು ತಗುಲದಂತೆ ಎಸೆಸೆಲ್ಸಿ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪರೀಕ್ಷೆ ನಡೆಸುವ ರಾಜ್ಯ ಸರಕಾರದ ನಿರ್ಧಾರವನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಹೀಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿ ಜಾಗರೂಕತೆಯಿಂದ ಪರೀಕ್ಷೆಯನ್ನು ನಡೆಸಬೇಕು. ರಾಜ್ಯದ 2,879 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಆರಂಭವಾಗುವ ಪರೀಕ್ಷೆಯಲ್ಲಿ 8,48,203 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶಗಳಿಲ್ಲದಂತೆ ಸರಕಾರ ನೀಡಿರುವ ಸೂಚನೆಗಳನ್ನು ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.

ಕುಟುಂಬ ಸದಸ್ಯರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ವಯಂಗೃಹ ಬಂಧನದಲ್ಲಿರುವ ಕೋವಿಡ್-19 ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವರು, ಎಸೆಸೆಲ್ಸಿ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಮ್ಮ ನಿವಾಸದಿಂದಲೇ ವಿಡಿಯೋ ಸಂವಾದ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.

ಮನೆಯಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದು ಮನೆಗೆ ಹಿಂತಿರುಗುವ ತನಕ ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಎಲ್ಲ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಮನ್ವಯದಿಂದ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಡೆ ಮಕ್ಕಳನ್ನು ಕರೆತರುವ ವಾಹನ, ಪರೀಕ್ಷಾ ಕೇಂದ್ರಗಳ ಬಳಿ, ಪರೀಕ್ಷಾ ಕೊಠಡಿ, ಶೌಚಾಲಯ ಇತ್ಯಾದಿ ಸ್ಥಳಗಳನ್ನು ಸ್ಯಾನಿಟೈಸ್ ಮಾಡಬೇಕು. ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ನೀಡಿ ಪರೀಕ್ಷೆ ಬರೆಯುವ ಕೊಠಡಿಯಲ್ಲೂ ಅಂತರ ಇರುವಂತೆ ನೋಡಿಕೊಳ್ಳಬೇಕು ಎಂದರು.

ಬೆಳಗ್ಗೆ 7.30 ಕ್ಕೆ ಬರುವುದರಿಂದ ಪರೀಕ್ಷೆ ಬರೆದು ಹಿಂತಿರುಗುವ ತನಕ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಪ್ರತಿ ಮಗುವಿಗೂ ಚಿಕ್ಕ ಬಿಸ್ಕೆಟ್ ಪ್ಯಾಕ್ ನೀಡಬೇಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಹಣ ಭರಿಸುವಂತೆ ಸೂಚಿಸಿದರು. ಪ್ರತಿ ವಿದ್ಯಾರ್ಥಿಯನ್ನೂ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ನಡೆಸಿ ಒಳಬಿಡಬೇಕು. ಒಂದು ವೇಳೆ ಜ್ವರ ಸಹಿತ ಇತರೆ ಸೋಂಕುಗಳಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.

ಕ್ವಾರಂಟೈನ್ ಪ್ರದೇಶಗಳ ಮಕ್ಕಳಿಗೆ ಪ್ರತ್ಯೇಕ ಕೇಂದ್ರಗಳನ್ನು ಮೀಸಲಿಟ್ಟು ಒಂದು ವೇಳೆ ಅವರು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬುದನ್ನು ಖಚಿತಪಡಿಸಿಕೊಂಡ ಸಚಿವರು, ಪೋಷಕರಿಗೆ ಆತಂಕಗಳಿಲ್ಲದಂತೆ ಜಿಲ್ಲಾಡಳಿತಗಳು ಮಾಧ್ಯಮಗಳ ಮೂಲಕ ಸರಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆ ಇತರೆ ಇಲಾಖೆಗಳ ಸಮನ್ವಯದೊಂದಿಗೆ ಮಾಡಿಕೊಂಡಿರುವ ಸಿದ್ಧತೆ, ವಿದ್ಯಾರ್ಥಿ, ಪರೀಕ್ಷಾ ಸಿಬ್ಬಂದಿ ಮತ್ತು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೆ ನೀಡಿರುವ ಮಾರ್ಗಸೂಚಿಗಳ ಮಾಹಿತಿ ಪಡೆದ ಸಚಿವರು, ಎಲ್ಲವೂ ಯೋಜನಾಬದ್ಧವಾಗಿ, ವೈಜ್ಞಾನಿಕ ಆಲೋಚನೆ ಹಿನ್ನಲೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆದರೆ ಅವುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಆ ಮೂಲಕ ರಾಜ್ಯ ಸರಕಾರದ ನಿರ್ಧಾರದ ಜತೆ ಕೈಜೋಡಿಸಬೇಕು ಎಂದು  ಮನವಿ ಮಾಡಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 458 ಕ್ವಾರಂಟೈನ್ ಪ್ರದೇಶಗಳಿವೆ. ಅಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಬಗ್ಗೆ ಗರಿಷ್ಠ ಪ್ರಮಾಣದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಆ ಮಕ್ಕಳಲ್ಲಿ ಯಾರಿಗಾದರೂ ಸೋಂಕಿನ ಸೂಚನೆ ಕಂಡು ಬಂದಲ್ಲಿ ತಕ್ಷಣವೇ ಪರೀಕ್ಷಾಕೇಂದ್ರದ ಬಳಿಯಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹತ್ತಿರದ ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆದೊಯ್ದು ಪರೀಕ್ಷೆ ನಡೆಸಬೇಕು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಸಚಿವ ಸುರೇಶ್‍ ಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‍ ಅಖ್ತರ್, ಶಿಕ್ಷಣ ಇಲಾಖೆ ಕಾರ್ಯದರ್ಶಿ ಉಮಾಶಂಕರ್, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್‍ಕುಮಾರ್, ಬಿಬಿಎಂಪಿ ಉಸ್ತುವಾರಿ ಮಂಜುನಾಥ್, ನಿರ್ದೇಶಕಿ ಸುಮಂಗಲ, ತಜ್ಞರಾದ ಡಾ. ಸುದರ್ಶನ್, ಡಾ. ಗಿರಿಬಾಬು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News