ತಜ್ಞರ ವರದಿ ಆಧರಿಸಿ ಲಾಕ್‍ಡೌನ್ ಬಗ್ಗೆ ತೀರ್ಮಾನ: ಸಚಿವ ಶ್ರೀರಾಮುಲು
ಬೆಂಗಳೂರು, ಜೂ. 24: ಬೆಂಗಳೂರು ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡಬೇಕೇ ಅಥವಾ ಬೇಡವೇ ಎಂದು ತೀರ್ಮಾನ ಮಾಡಲು ತಜ್ಞರ ಸಮಿತಿ ಇದೆ. ಅದರ ಸಲಹೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸಬೇಕೆಂಬ ಅಭಿಪ್ರಾಯ ಕೇಳಿಬಂದಿದೆ. ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ 15 ವಿವಿಧ ವರ್ಗಗಳನ್ನು ಮಾಡಿ ಪರೀಕ್ಷೆ ನಡೆಸಬೇಕಿದೆ. ಇದರಿಂದ ಕೊರೋನ ಸೋಂಕು ಸಮುದಾಯಕ್ಕೆ ಹರಡಿದೆಯೋ ಇಲ್ಲವೇ ಎಂಬುದು ಗೊತ್ತಾಗಲಿದೆ ಎಂದರು.
ಕೊರೋನ ಸೋಂಕು ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಟಾಸ್ಕ್ ಫೋರ್ಸ್ ಸಭೆ ಸೋಮವಾರ ಇದ್ದು, ಈ ಸಭೆಯಲ್ಲಿ ಚರ್ಚಿಸಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತರಲಾಗುವುದು. ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ನನ್ನ ವೈಯಕ್ತಿಯ ಅಭಿಪ್ರಾಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದರು.
ಹೊರ ರಾಜ್ಯಗಳಿಂದ ಆಗಮಿಸಿದ ವ್ಯಕ್ತಿಗಳಿಂದ ಸೋಂಕು ಹೆಚ್ಚಾಗಿದ್ದು, ಸೋಂಕು ಯಾವುದೇ ಕಾರಣಕ್ಕೂ ಸಮುದಾಯಕ್ಕೆ ಹರಡದಂತೆ ಸರಕಾರ ಅಗತ್ಯ ಮುನ್ನಚ್ಚರಿಕೆ ವಹಿಸಿದೆ. ಒಂದೆರಡು ವಾರಗಳಿಂದ ಕೊರೋನ ಸೋಂಕು ಹೆಚ್ಚುತ್ತಿದ್ದು, ಸಾರ್ವಜನಿಕರು ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ನೈರ್ಮಲ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳು ಜಾಗ್ರತೆ ವಹಿಸಲಿ
ರಾಜ್ಯಾದ್ಯಂತ ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಪರೀಕ್ಷಾ ಕೊಠಡಿಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಸೋಂಕಿನ ಬಗ್ಗೆ ಮಕ್ಕಳು ಹಾಗೂ ಪೋಷಕರು ಯಾವುದೇ ಭಯಪಡಬೇಕಿಲ್ಲ. ಶಿಕ್ಷಣ ಸಚಿವರು ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ. ಕಂಟೈನ್ಮೆಂಟ್ ವಲಯಗಳಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಲಾಗುವುದು.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ