ಪೊಲೀಸರ ಸೋಗಿನಲ್ಲಿ ಕಳವು: ಆರೋಪಿ ಬಂಧನ

Update: 2020-06-24 18:01 GMT

ಬೆಂಗಳೂರು, ಜೂ.24: ಪೊಲೀಸ್ ಎಂದು ನಂಬಿಸಿ ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊರ್ವನನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯ ನಗರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮಹೇಶ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ ನಗರದ ಜಿ.ಕೆ ಪ್ರಿಂಟಿಂಗ್ ಪಾಯಿಂಟ್ ಬಳಿ ವೇದಮೂರ್ತಿ ಎಂಬುವವರು ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಆರೋಪಿ ಮಹೇಶ್ ತಾನು ಪೊಲೀಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡು ಬಾಡಿಗೆಗೆ ಕಾರು ಬೇಕೆಂದು ಕರೆದೊಯ್ದಿದ್ದಾನೆ. ನಂತರ ಪೊಲೀಸ್ ಎಂದು ಹೆದರಿಸಿ ಮೊಬೈಲ್ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತ ಜೆ.ಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿ ನಂತರ ವಾಹನ ಸಂಖ್ಯೆಯ ಫಲಕ ಬದಲಾಯಿಸಿ ಅದರ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಾರ್ವಜನಿಕರಿಗೆ ಬೆದರಿಸಿ ಹಣ, ಮೊಬೈಲ್ ಲೂಟಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಈತನಿಂದ ವಿವಿಧ ಕಂಪೆನಿಗಳ 20 ಮೊಬೈಲ್, ನಗದು, ಬೈಕ್ ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News