ಲಸಿಕೆಗಳು ಭಾರೀ ಮುಖ್ಯ

Update: 2020-06-24 18:38 GMT

ವೈದ್ಯಕೀಯ ವಿಜ್ಞಾನ ಮನುಕುಲಕ್ಕೆ ನೀಡಿದ ಅತ್ಯಂತ ದೊಡ್ಡ ವರದಾನಗಳಲ್ಲಿ ಒಂದು ವರದಾನ ಲಸಿಕೆಗಳು. ಲಸಿಕೆಗಳು ಮಾನವನ ಜೀವಕ್ಕೆ ಬೆದರಿಕೆಯೊಡ್ಡುವ ಹಲವು ಕಾಯಿಲೆಗಳನ್ನು ಹಾಗೂ ಸೋಂಕುಗಳನ್ನು ತಡೆಯಲು ಮತ್ತು ನಿರ್ಮೂಲನ ಮಾಡಲು ನೆರವಾಗಿವೆ.ಅವುಗಳು ವಿಶ್ವದೆಲ್ಲೆಡೆ ಆರೋಗ್ಯ ರಂಗಕ್ಕೆ ಬೃಹತ್ ಕೊಡುಗೆಯನ್ನು ನೀಡಿವೆ; ಸಿಡುಬಿನಂತಹ ಕಾಯಿಲೆಗಳನ್ನು ನಿರ್ಮೂಲನ ಮಾಡಲು ಹಾಗೂ ಪೋಲಿಯೊದಂತಹ ಇತರ ಕಾಯಿಲೆಗಳನ್ನು ನಾಶದ ಅಂಚಿಗೆ ತಂದು ನಿಲ್ಲಿಸಲು ಅವುಗಳು ವೈದ್ಯಕೀಯ ವಿಜ್ಞಾನವನ್ನು ಸಮರ್ಥವಾಗಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಲಸಿಕೆ ನೀಡಿಕೆಯಿಂದಾಗಿ ಪ್ರತಿವರ್ಷ 20ರಿಂದ 30ಲಕ್ಷದಷ್ಟು ಸಾವುಗಳನ್ನು ತಡೆಯವುದು ಸಾಧ್ಯವಾಗಿದೆ.

 ಇತ್ತೀಚಿನ ಕೊರೋನ ಸಾಂಕ್ರಾಮಿಕದ ವಿರುದ್ಧದ ಹೋರಾಟದ ಹಾಗೆ ಕಾಯಿಲೆಗಳ ವಿರುದ್ಧ ನಾವು ನಡೆಸುವ ಹೋರಾಟ ನಿಧಾನಗತಿಯದ್ದಾಗಬಹುದು. ಭಾರತದಂತಹ ಅಷ್ಟೊಂದು ಬಲಿಷ್ಠವಲ್ಲದ ಆರೋಗ್ಯ ಸೇವಾ ವ್ಯವಸ್ಥೆ ಇರುವ ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡುವುದು ಅವರನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಅತ್ಯಂತ ಅನಿವಾರ್ಯ ಕ್ರಮವಾಗುತ್ತದೆ. ಯಾವುದೇ ಸಮುದಾಯದ ಆರೋಗ್ಯ ಸೇವಾ ಕಾರ್ಯಕ್ರಮದಲ್ಲಿ ಲಸಿಕೆಗಳು ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿವೆ. ಹೀಗಾಗಿ 1974ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ವಿಸ್ತರಿಸಿ ಲಸಿಕೆ ನೀಡಿಕೆಯ ಲಾಭಗಳು ಇಡೀ ವಿಶ್ವಕ್ಕೆ ಲಭಿಸುವಂತೆ ಮಾಡಿತು. ಈಗ ಈ ಕಾರ್ಯಕ್ರಮ ವಿಶ್ವದ ಜನಸಂಖ್ಯೆಯ ಶೇ.80 ಜನರನ್ನು ತಲುಪಲು ಸಮರ್ಥವಾಗಿದೆ. ಪರಿಣಾಮವಾಗಿ ಮೀಸಲ್ಸ್‌ಮತ್ತು ನವಜಾತ ಶಿಶುಗಳಿಗೆ ಬರುವ ಧನುರ್ವಾತದಂತಹ ಕಾಯಿಲೆಗಳಿಂದ ಸಂಭವಿಸುವ ಸಾವುಗಳಲ್ಲಿ ಬಹುದೊಡ್ಡ ಪ್ರಮಾಣದ ಇಳಿಕೆಯಾಗಿದೆ. ಭಾರತದ ಮೆಟ್ಟಿಗೆ ಹೇಳುವುದಾದರೆ, ಇಲ್ಲಿ ಪ್ರತಿ ವರ್ಷ, ಲಸಿಕೆಯಿಂದ ತಡೆಯಬಹುದಾದ ಕಾಯಿಲೆಗೆ ತುತ್ತಾಗಿ ಸುಮಾರು 5 ಲಕ್ಷ ಮಕ್ಕಳು ಸಾಯುತ್ತವೆ ಮತ್ತು ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಲಿಸಿಕೆ ನೀಡಿಕೆಯಿಂದ ಹೊರಗುಳಿಯುತ್ತದೆ. ಈ ಸಂಖ್ಯೆಯನ್ನು ಇಳಿಸಲು ಭಾರತ ಸರಕಾರ ಆರು ಗಂಭೀರ ಸ್ವರೂಪದ ಮಾರಣಾಂತಿಕ ಕಾಯಿಲೆಗಳನ್ನು ತಡೆಯುವ ಉದ್ದೇಶದಿಂದ 1985ರಲ್ಲಿ ಯುನಿವರ್ಸಲ್ ಇಮ್ಯುನೈಜೇಶನ್ ಪ್ರೋಗ್ರಾಮ್‌ನ್ನು (ಯುಐಪಿ)- (ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ) ಆರಂಭಿಸಿತು. ಈ ಕಾಯಿಲೆಗಳಲ್ಲಿ ಡಿಫ್ತೀರಿಯಾ, ಪರ್ಟುಸಿಸ್ ಟೆಟಾನಸ್, ಮಂಪ್ಸ್ (ದಢಾರ) ಹಾಗೂ ಮೀಸಲ್ಸ್ ಸೇರಿವೆ. ಅಂತಿಮವಾಗಿ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ‘ಪೋಲಿಯೊ ಮುಕ್ತ’ ದೇಶವೆಂದು ಘೋಷಿಸಿತು.

 ಈಗ, ಯುಐಪಿಯ ಒಂದು ಭಾಗವಾಗಿ ಹಲವು ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಇದರ ಪರಿಣಾಮವಾಗಿ ಭಾರತದಲ್ಲಿ ಶಿಶು ಮರಣಗಳ ಸಂಖ್ಯೆ ಕಡಿಮೆಯಾಗಿದೆ. ಈಗ ರೊಟಾ ವೈರಸ್, ರುಬೆಲ್ಲಾ ಹಾಗೂ ಐಪಿವಿ ಸೇರಿದಂತೆ ಹನ್ನೆರಡು ಲಸಿಕೆಗಳು ಐದು ವರ್ಷದ ಒಳಗಿನ ಮಕ್ಕಳ ಲಸಿಕೆ ನೀಡಿಕೆ ಕಾರ್ಯಕ್ರಮದ ಒಂದು ಭಾಗವಾಗಿವೆ. ಈ ಲಸಿಕೆಗಳಿಂದಾಗಿ ಶಿಶುಗಳ ಸಾವನ್ನು ನಿಯಂತ್ರಿಸುವುದರ ಜೊತೆಗೆ ಶಿಶು ಮರಣಗಳಿಗೆ ಕಾರಣವಾಗುವ ಹಲವು ರೋಗಗಳ ನಿರ್ಮೂಲನ ಸಾಧ್ಯವಾಗಿದೆ.

ವಿಶ್ವ ರೋಗ ನಿರೋಧಕ ಸಪ್ತಾಹದ ಉದ್ದೇಶ ಈ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಮಹತ್ವವನ್ನು ವಿಶ್ವದ ಜನತೆಗೆ ತಿಳಿಸಿ ಹೇಳುವುದೇ ಆಗಿದೆ. ಈ ಸಪ್ತಾಹದ 2020ರ ಧ್ಯೇಯವಾಕ್ಯ ‘ವ್ಯಾಕ್ಸಿನ್ಸ್ ವರ್ಕ್ಸ್ ಫಾರ್ ಆಲ್’ (ಲಸಿಕೆಗಳು ಎಲ್ಲರ ಆರೋಗ್ಯವನ್ನು ಕಾಪಾಡುತ್ತವೆೆ) ಎನ್ನುವುದೇ ಆಗಿದೆ. ಇದು ಲಸಿಕೆಗಳನ್ನು ಹಾಗೂ ಅವುಗಳನ್ನು ತಯಾರಿಸುವ, ಅಭಿವೃದ್ಧಿಪಡಿಸುವ, ವಿತರಿಸುವ ಹಾಗೂ ಅಂತಿಮವಾಗಿ ತೆಗೆದುಕೊಳ್ಳುವ ಜನರು ಹೇಗೇ ಹೀರೋಗಳು ಎನ್ನುವುದನ್ನು ತೋರಿಸಿ ಕೊಡುವುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಲಿದೆ. ಜಾಗತಿಕವಾಗಿ ಲಸಿಕೆ ನೀಡಿಕೆಗೆ ಹೆಚ್ಚಿನ ಒತ್ತು ನೀಡುವುದು ಈ ಕಾರ್ಯಕ್ರಮದ ಮುಖ್ಯ ಗುರಿ.

ಈ ಗುರಿ ತಲುಪಲು ಮೂರು ರೀತಿಯ ಕೆಲಸಗಳನ್ನು ಮಾಡಲಾಗುತ್ತದೆ; ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಲಸಿಕೆಗಳು ಎಷ್ಟು ಅಮೂಲ್ಯವೆಂದು ತೋರಿಸಿಕೊಡುವುದು; ಪ್ರಬಲವಾದ ಆರೋಗ್ಯ ವ್ಯವಸ್ಥೆ ನಿರ್ಮಿಸುವುದರಲ್ಲಿ ನಿಗದಿತವಾಗಿ ಲಸಿಕೆ ನೀಡಿಕೆ ಹೇಗೆ ಭದ್ರವಾದ ಬುನಾದಿಯಾಗುತ್ತದೆ ಎಂದು ತಿಳಿಸುವುದು ಮತ್ತು ಲಸಿಕೆ ನೀಡಿಕೆ/ಚುಚ್ಚುಮದ್ದು ನೀಡಿಕೆಯನ್ನಾಧರಿಸಿ ಆರೋಗ್ಯ ವ್ಯವಸ್ಥೆಯಲ್ಲಿರುವ ಕುಂದು ಕೊರತೆಗಳನ್ನು ಸರಿಪಡಿಸುವುದು. ಲಸಿಕೆಗಳ ತಯಾರಿಕೆಯಲ್ಲಿ ಹಾಗೂ ರೋಗ ನಿರೋಧಕ ಕಾರ್ಯಕ್ರಮಗಳಲ್ಲಿ ಇನ್ನಷ್ಟು ಬಂಡವಾಳ ತೊಡಗಿಸುವುದರ ಜತೆಗೆ ಸಾರ್ವಜನಿಕ ಹಾಗೂ ಖಾಸಗಿರಂಗಗಳು ಪರಸ್ಪರ ಕೈಜೋಡಿಸಬೇಕಾಗಿದೆ. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಕೇವಲ ಮಕ್ಕಳ ಆರೋಗ್ಯಕ್ಕಷ್ಟೇ ಅಲ್ಲ, ದೇಶದ ಒಟ್ಟು ಒಳಿತಿಗಾಗಿ, ಸೂಕ್ತ ಸಮಯದಲ್ಲಿ ಮಕ್ಕಳಿಗೆ ಲಸಿಕೆ ನೀಡುವುದನ್ನು ಖಾತರಿಪಡಿಸಬೇಕಾಗಿದೆ.

(ಲೇಖಕರು ಪೋರ್ಟಿಯಾ ಮೆಡಿಕಲ್‌ನಲ್ಲಿ ವೈದ್ಯಕೀಯ ನಿರ್ದೇಶಕರಾಗಿದ್ದಾರೆ)

Writer - ಡಾ.ವಿಶಾಲ್ ಸೆಹ್ ಗಲ್

contributor

Editor - ಡಾ.ವಿಶಾಲ್ ಸೆಹ್ ಗಲ್

contributor

Similar News