Breaking News: ಸಿಬಿಎಸ್ ಇ 10ನೆ ತರಗತಿ ಪರೀಕ್ಷೆಗಳು ರದ್ದು

Update: 2020-06-25 14:35 GMT

ಹೊಸದಿಲ್ಲಿ, ಜೂ.25: ಜುಲೈ 1ರಿಂದ 15ರವರೆಗೆ ನಡೆಯಬೇಕಿದ್ದ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. 12 ನೇ ತರಗತಿ ಪರೀಕ್ಷೆಯನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು ಮುಂದೆ ಪರಿಸ್ಥಿತಿ ಸುಧಾರಿಸಿದರೆ ನಡೆಸಲಾಗುವುದು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೊರೋನ ವೈರಸ್ ಸಮಸ್ಯೆಯಿಂದಾಗಿ ಪರೀಕ್ಷೆ ನಡೆಸಲು ತಮಗೆ ಸಾಧ್ಯವಾಗದು ಎಂದು ದಿಲ್ಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ತಿಳಿಸಿವೆ. ಆದ್ದರಿಂದ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. 12ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಎರಡು ಆಯ್ಕೆಗಳಿವೆ. ಪರೀಕ್ಷೆ ರದ್ದುಗೊಂಡರೆ ಕಳೆದ 3 ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಗ್ರೇಡ್ ನೀಡಲಾಗುವುದು. ಎರಡನೇ ಆಯ್ಕೆಯಲ್ಲಿ, ಮುಂದಿನ ದಿನಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಬರೆಯುವ ಅವಕಾಶವಿರುತ್ತದೆ. ತಮಗಿಷ್ಟ ಬಂದದ್ದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬಹುದು ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಜುಲೈಯಲ್ಲಿ ನಿಗದಿಯಾಗಿದ್ದ ಪರೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ವಿದ್ಯಾರ್ಥಿಗಳ ಹೆತ್ತವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪರೀಕ್ಷೆ ರದ್ದುಗೊಳಿಸುವ ನಿರ್ಧಾರಕ್ಕೆ ಬರುವ ಮುನ್ನ ಆಯಾ ರಾಜ್ಯಗಳ ಪರೀಕ್ಷಾ ಮಂಡಳಿಯ ಜೊತೆ ಚರ್ಚಿಸಲಾಗಿದೆಯೇ ಎಂದು ಸಿಬಿಎಸ್‌ಇ ಪ್ರತಿನಿಧಿಯಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಪ್ರಶ್ನಿಸಿತು. ಸಿಬಿಎಸ್‌ಇ ಪರೀಕ್ಷೆಯನ್ನು ಕೇಂದ್ರೀಯವಾಗಿ ನಿಯಂತ್ರಿಸಲಾಗುತ್ತಿದೆ ಮತ್ತು ರಾಜ್ಯಗಳ ಪರೀಕ್ಷಾ ಮಂಡಳಿ ಸಿಬಿಎಸ್‌ಇಗೆ ನೆರವಾಗುತ್ತದೆ ಎಂದುತ್ತರಿಸಿದರು.

ಇದೇ ಸಂದರ್ಭ ಐಸಿಎಸ್‌ಇ , ಐಎಸ್‌ಸಿ ಪರೀಕ್ಷೆಯ ಕುರಿತ ಅರ್ಜಿಯ ವಿಚಾರಣೆಯೂ ನಡೆದಿದ್ದು 10 ಮತ್ತು 12ನೇ ತರಗತಿ ಪರೀಕ್ಷೆ ರದ್ದುಗೊಳಿಸುವುದಾಗಿ ಸಿಐಎಸ್‌ಸಿಇ ತಿಳಿಸಿತು. ಪರೀಕ್ಷೆಯ ಫಲಿತಾಂಶ ಆಗಸ್ಟ್‌ನಲ್ಲಿ ಪ್ರಕಟವಾದರೆ ಹೊಸ ಶೈಕ್ಷಣಿಕ ವರ್ಷವನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಬಹುದು ಎಂದು ಸುಪ್ರೀಂಕೋರ್ಟ್ ಇದೇ ಸಂದರ್ಭ ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News