ಎಸೆಸೆಲ್ಸಿ ಪರೀಕ್ಷೆ ವೇಳೆ ಕರ್ಫ್ಯೂ ಜಾರಿಗೆ ಹೈಕೋರ್ಟ್ ನಕಾರ

Update: 2020-06-26 13:56 GMT

ಬೆಂಗಳೂರು, ಜೂ.26: ಎಸೆಸೆಲ್ಸಿ ಪರೀಕ್ಷೆ ವೇಳೆ ಕರ್ಫ್ಯೂ ಜಾರಿಗೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಕರ್ಫ್ಯೂ ಜಾರಿಗೆ ನಿರಾಕರಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಈ ಕುರಿತು ವಕೀಲ ದಿಲ್‍ರಾಜ್ ಸಿಕ್ವೇರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು.

ಎಸೆಸೆಲ್ಸಿ ಪರೀಕ್ಷೆ ನಡೆಯುವ ಶಾಲೆಗಳ ಸುತ್ತಮುತ್ತ ಪೋಷಕರು, ಮಕ್ಕಳು ಸೇರುವ ಸಂಭವವಿರುತ್ತದೆ. ಹೀಗಾಗಿ, ಪೋಷಕರು ಹಾಗೂ ಮಕ್ಕಳು ಗುಂಪು ಸೇರದಂತೆ ಸೂಚನೆ ನೀಡಬೇಕು ಎಂದು ನ್ಯಾಯಪೀಠವು ಸರಕಾರಕ್ಕೆ ಸೂಚನೆ ನೀಡಿತು.

ಕೊರೋನ ವೈರಸ್ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಯಾವುದೇ ಕಾರಣಕ್ಕೂ ಪರೀಕ್ಷೆಯ ಮೊದಲು ಹಾಗೂ ನಂತರ ಗುಂಪು ಸೇರದಂತೆ ನೋಡಿಕೊಳ್ಳಬೇಕೆಂದು ಪೀಠವು ಸೂಚನೆ ನೀಡಿತು.

ವಕೀಲ ದಿಲ್‍ರಾಜ್ ಸಿಕ್ವೇರಾ ಅವರು 'ಎಸೆಸೆಲ್ಸಿ ಪರೀಕ್ಷೆ ವೇಳೆ ಕರ್ಫ್ಯೂ ಜಾರಿಗೊಳಿಸಿದರೆ, ಕೊರೋನ ಸೋಂಕು ತಗಲದಂತೆ ತಡೆಗಟ್ಟಬಹುದು. ಹೀಗಾಗಿ, ಕರ್ಫ್ಯೂ ಜಾರಿಗೊಳಿಸಬೇಕೆಂದು' ಅರ್ಜಿ ಸಲ್ಲಿಸಿದ್ದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಕರ್ಫ್ಯೂ ಜಾರಿಗೆ ನಿರಾಕರಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News