ವಿಧಾನ ಪರಿಷತ್ ಸದಸ್ಯ ಸ್ಥಾನ: ಹಿಂದುಳಿದ ಸಮಾಜಕ್ಕೆ ಪ್ರಾಮುಖ್ಯತೆ ನೀಡಲು ಸಿಎಂಗೆ ಮನವಿ

Update: 2020-06-26 13:00 GMT

ಬೆಂಗಳೂರು, ಜೂ.26: ಹಿಂದುಳಿದ ಸಮಾಜವಾಗಿರುವ ಕೋಲಿ-ಗಂಗಾಮತ ಜನಾಂಗ ರಾಜಕೀಯವಾಗಿ ಮುಂದಾಗಲು ವಿಧಾನ ಪರಿಷತ್ತಿನಲ್ಲಿ ಒಂದು ಸ್ಥಾನ ನೀಡಬೇಕೆಂದು ಕೋರಿ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಕಾರಿ ಜಗದ್ಗುರು ಶಾಂತಭೀಮ ಚೌಡಯ್ಯ ಸ್ವಾಮೀಜಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದ ನಿಯೋಗದ ಸದಸ್ಯರು, ಕೋಲಿ ಗಂಗಾಮತ ಸಮಾಜದ ಮುಖಂಡರೊಬ್ಬರಿಗೆ ವಿಧಾನ ಪರಿಷತ್ತಿನ ಸ್ಥಾನ ನೀಡಿ, ಸಮಾಜದ ಬೆಳವಣಿಗೆಗೆ ಬಿಜೆಪಿ ಪಕ್ಷ ಮುಂದಾಗಬೇಕೆಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಲಿ-ಗಂಗಾಮತ ಸಮಾಜವು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿಯೇ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಈ ಸಮಾಜದ ಮುಖಂಡರಿಗೆ ವಿಧಾನ ಪರಿಷತ್ತಿನ ಸ್ಥಾನ ಸೇರಿದಂತೆ ಇನ್ನಿತರೆ ಮಂಡಳಿಗಳಲ್ಲಿ ಉನ್ನತ ಸ್ಥಾನಗಳನ್ನು ನೀಡಲಾಗಿದೆ. ಆದರೆ, ಇದೀಗ ಬಹುತೇಕ ಈ ಸಮಾಜ ಬಿಜೆಪಿ ಪರವಾಗಿ ಒಲವು ತೋರಿದ್ದರಿಂದ ಓರ್ವರನ್ನು ಪರಿಷತ್ತಿನ ಸದಸ್ಯರನ್ನಾಗಿ ಮಾಡಬೇಕೆಂದು ಪೀಠದ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸದಸ್ಯರು ನುಡಿದರು.

ಬಿಜೆಪಿ ಹಿರಿಯ ನಾಯಕ ಅವ್ವಣ್ಣ ಎಸ್.ಮ್ಯಾಕೇರಿ ಅವರನ್ನು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನೇಮಕ ಮಾಡಬೇಕು. ಅವರು ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡಿದರೆ ಸಮುದಾಯಕ್ಕೆ ಮಾನ್ಯತೆ ದೊರೆಯುತ್ತದೆ. ಅಲ್ಲದೆ, ಗಂಗಾಮತಸ್ಥರ ಇತರ ಪಂಗಡದ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರ ಅವಧಿಯೂ ಮುಗಿದಿದ್ದು, ಈ ಸಮಾಜದಲ್ಲಿ ಯಾರೊಬ್ಬರು ಪರಿಷತ್ತಿನ ಸ್ಥಾನದಲ್ಲಿ ಇಲ್ಲ ಎಂದು ಶಾಂತಭೀಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಮುಖಂಡರಾದ ನಾಗರಾಜ ಮಣ್ಣೂರ್, ಸಾಯಿಬಣ್ಣ ಬೋರಬಂಡ, ಮುರಳೀಧರ್, ಬಸವರಾಜ ಸಪ್ಪನಗೋಳ್, ಸೂರ್ಯ ಪ್ರಕಾಶ್ ಕೋಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News