ನಮಗೆ ಮುಖ್ಯವಾಗಿರುವುದು ಯೋಧರ ಜೀವವೇ ? ಪ್ರಧಾನಿಯ 56 ಇಂಚಿನ ವ್ಯಕ್ತಿತ್ವವೇ ?: ಸಿದ್ದರಾಮಯ್ಯ

Update: 2020-06-26 15:37 GMT

ಬೆಂಗಳೂರು, ಜೂ.26: ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ಶಾಸಕರನ್ನು ಯಾಕೆ ಕರೆದಿದ್ದಾರೋ ಗೊತ್ತಿಲ್ಲ. ಆದರೆ, ಕೊರೋನ ವಿಚಾರದಲ್ಲಿ ಶಾಸಕರ ಬದಲು ಸರ್ವಪಕ್ಷಗಳ ಸಭೆಯನ್ನು ಕರೆಯುವುದು ಉತ್ತಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗಲ್ವಾನ್ ಗಡಿ ಪ್ರದೇಶದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪೂರ್ವ ಸಿದ್ಧತೆಯಿಲ್ಲದೆ ಪ್ರಾರಂಭದಲ್ಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಜನರ ಆರೋಗ್ಯ ಮತ್ತು ರಾಜ್ಯದ ಆರ್ಥಿಕತೆ ಎರಡೂ ಹಾಳಾಯಿತು. ಈಗ ಕೊರೋನ ಸೋಂಕು ವ್ಯಾಪಕವಾಗುತ್ತಿರುವಾಗ ಲಾಕ್‍ಡೌನ್ ಆಗಬೇಕಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಕೊರೋನ ಪರಿಸ್ಥಿತಿಯನ್ನು ನಿಯಂತ್ರಿಸುವುದಲ್ಲಿ ಸಂಪೂರ್ಣ ವಿಫಲವಾಗಿದೆ. ಆಗ ಏಕಾಏಕಿ ಲಾಕ್‍ಡೌನ್ ಮಾಡಿದ್ದು ತಪ್ಪು. ನಿಜವಾಗಲೂ ಈಗ ಲಾಕ್‍ಡೌನ್ ಮಾಡಬೇಕಿತ್ತು. ಹೆಚ್ಚು ಜನರಿಗೆ ಪರೀಕ್ಷೆ ಮಾಡಿದರೆ, ಇನ್ನು ಹೆಚ್ಚು ಪ್ರಕರಣಗಳು ಕಂಡು ಬರಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ಜುಲೈ-ಆಗಸ್ಟ್ ವೇಳೆ ಕೊರೋನ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ನಡೆಯುತ್ತಿರುವ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿ. ಸರಕಾರ ಕೊರೋನ ವಿಚಾರದಲ್ಲಿ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆದರೆ, ಅಲ್ಲಿ ನಮ್ಮ ಸಲಹೆಗಳನ್ನು ನೀಡುತ್ತೇವೆ. ಅಲ್ಲದೆ, ಸರಕಾರದ ವೈಫಲ್ಯತೆಗಳನ್ನು ಎತ್ತಿ ತೋರಿಸುತ್ತೇವೆ ಎಂದು ಅವರು ತಿಳಿಸಿದರು.

ಸೈನಿಕರು ಹಾಗೂ ರೈತರು ನಮ್ಮ ದೇಶದ ಬೆನ್ನೆಲುಬು ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ. ನರೇಂದ್ರ ಮೋದಿಯ ಸಂಕುಚಿತ ದೃಷ್ಠಿಯ ನೀತಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ನೈಜ ಮಾಹಿತಿಯನ್ನು ಮರೆ ಮಾಚುವ ಮೂಲಕ ನಮ್ಮ ಯೋಧರನ್ನು ನಿರಾಸೆಗೊಳಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ನರೇಂದ್ರ ಮೋದಿಯ ರಾಜತಾಂತ್ರಿಕ ವೈಫಲ್ಯಗಳಿಂದಾಗಿ ಇವತ್ತು ನಮ್ಮ ಯೋಧರ ಜೀವಗಳು ಹಾಗೂ ದೇಶ ಬೆಲೆ ತೆತ್ತಿದೆ. ತನ್ನ 56 ಇಂಚಿನ ವ್ಯಕ್ತಿತ್ವವನ್ನು ರಕ್ಷಿಸಿಕೊಳ್ಳಲು ಚೀನಾದಿಂದ ನಡೆದಿರುವ ಆಕ್ರಮಣಗಳನ್ನು ಅಲ್ಲಗೆಳೆಯುತ್ತಿದ್ದಾರೆ. ಈಗ ನಮಗೆ ಮುಖ್ಯವಾಗಿರುವುದು ಯಾವುದು? ಯೋಧರ ಜೀವವೆ ಅಥವಾ ಅವರ 56 ಇಂಚಿನ ವ್ಯಕ್ತಿತ್ವವೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಮಾತನಾಡಿ, ಚೀನಾ ಗಲ್ವಾನ್ ನದಿಯ ನೀರನ್ನು ತಡೆದಿದೆ. ಆಧುನಿಕ ಯಂತ್ರೋಪಕರಣಗಳನ್ನು ಗಡಿಯಲ್ಲಿ ತಂದು ಇಳಿಸಿ ಮಿಲಿಟರಿ ವಾಹನಗಳನ್ನು ಜಮಾವಣೆ ಮಾಡಿದರೂ ನಮ್ಮ ಸೈನಿಕರ ರಕ್ಷಣೆಗೆ ನರೇಂದ್ರ ಮೋದಿ ಗಮನ ನೀಡದೆ ಹೋದದ್ದು ದೊಡ್ಡ ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರದ ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ಬಿ.ಎಲ್.ಶಂಕರ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News