ಮಾದಕ ವಸ್ತು ಮಾರಾಟ ದಂಧೆ: ಬೆಂಗಳೂರಿನಲ್ಲಿ 1 ವರ್ಷದಲ್ಲಿ 44 ವಿದೇಶಿಗರು ಸೇರಿ 1,845 ಮಂದಿ ಬಂಧನ

Update: 2020-06-26 17:05 GMT

ಬೆಂಗಳೂರು, ಜೂ.26: ಮಾದಕ ವಸ್ತುಗಳ ಮಾರಾಟ ಆರೋಪದಡಿ ಪ್ರಸಕ್ತ ಸಾಲಿನಲ್ಲಿ 44 ವಿದೇಶಿಯರು ಸೇರಿ 1845 ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಶುಕ್ರವಾರ ನಗರದ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 10,016 ಕೆ.ಜಿ. ಗಾಂಜಾ, 2.9 ಕೆ.ಜಿ. ಹಫೀಮು, 1 ಕೆ.ಜಿ. 15 ಗ್ರಾಂ ಆಶೀಸ್, 85 ಗ್ರಾಂ ಚರಸ್, 345 ಗ್ರಾಂ ಕೊಕೇನ್, 1079 ಕೆಮಿಕಲ್ ಡ್ರಗ್, ಬ್ರೌನ್ ಶುಗರನ್ನು ಜಪ್ತಿ ಮಾಡಲಾಗಿದೆ ಎಂದರು.

ಇದೇ ವಾರ್ಷಿಕ ಸಾಲಿನಲ್ಲಿ ಮೊದಲ ಬಾರಿಗೆ ನಗರ ಪೊಲೀಸರು ಅಂತರ್ಜಾಲದ ಡಾರ್ಕ್ ವೆಬ್ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ಆನ್‍ಲೈನ್ ಮೂಲಕ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯನ್ನು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ಅಂಚೆ ಇಲಾಖೆ ನೌಕರರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ನಿರಂತರವಾಗಿ ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಮಾದಕ ವ್ಯಸನವನ್ನು ನಿಯಂತ್ರಿಸಲು 1098 ಉಚಿತ ಸಹಾಯವಾಣಿ ಒದಗಿಸಲಾಗಿದ್ದು, ಇದಕ್ಕೆ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಮಾದಕ ವಸ್ತುಗಳ ವ್ಯಸನಕ್ಕೆ ವಿದ್ಯಾರ್ಥಿಗಳು, ಯುವಕರು, ಸುಶಿಕ್ಷಿತರು ಗುರಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಇಂದು (ಜೂ.26) ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಸಾಗಾಣಿಕೆ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲ್‍ದೀಪ್ ಕುಮಾರ್ ಜೈನ್, ರವಿಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News