‘ಚೀನಾ ನಮ್ಮ ಭೂಭಾಗವನ್ನು ವಶಪಡಿಸಿಕೊಂಡಿದೆ’: ಲಡಾಖ್ ಜನರ ವಿಡಿಯೋಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್

Update: 2020-06-26 18:32 GMT

ಹೊಸದಿಲ್ಲಿ: ಚೀನಾ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದ್ದು, ಯಾರೂ ಅತಿಕ್ರಮಣ ನಡೆಸಿಲ್ಲ ಎಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಲಡಾಖ್ ನ ಜನರು ಹೇಳುತ್ತಿದ್ದಾರೆ ಎಂದು ಹಲವು ವಿಡಿಯೋಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು, “ನನ್ನ ಹೆಸರು ಟುಂಡು ಪೇ. ನಾನು ಲೇಹ್ ಲಡಾಕ್ ನ ನಿವಾಸಿ. ನಾನೀಗ ಲೇಹ್ ಪಟ್ಟಣದಲ್ಲಿದ್ದೇನೆ. ದೇಶದ ಹಲವು ಮಾಧ್ಯಮಗಳು ಇಲ್ಲಿಗೆ ಆಗಮಿಸಿವೆ. ಇಲ್ಲಿಂದ ಮಾಧ್ಯಮದವರಿಗೆ ಮುಂದೆ ಹೋಗಲು ಅನುಮತಿಯಿಲ್ಲ. ಚಾನೆಲ್ ಗಳ ಮಂದಿ ಲೇಹ್ ನಲ್ಲೇ ಕುಳಿತುಕೊಂಡು ದೊಡ್ಡ ದೊಡ್ಡ ಬೆಟ್ಟಗಳನ್ನು ತೋರಿಸಿ ಗಲ್ವಾನ್ ಕಣಿವೆಯ ಬೆಟ್ಟಗಳು ಎಂದು ಹೇಳುತ್ತಿದ್ದಾರೆ. ಲೇಹ್ ನಲ್ಲಿ ಕುಳಿತು ವರದಿ ಮಾಡುತ್ತಿರುವ ಅವರು ನಾವು ಗಲ್ವಾನ್ ನಿಂದ ವರದಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಲ್ಲಿಂದ ಗಲ್ವಾನ್ ಕಣಿವೆಗೆ 218 ಕಿ.ಮೀ. ದೂರವಿದೆ. ಇಂತಹ ಸ್ಥಿತಿಯಲ್ಲಿ ದೇಶದ ಮಾಧ್ಯಮಗಳಿವೆ. ಅದು ದೇಶಕ್ಕೆ ಯಾಕೆ ಸುಳ್ಳು ಹೇಳುತ್ತಿದೆ?. ಇನ್ನೊಂದೆಡೆ ಗಡಿಭಾಗದಲ್ಲಿರುವ ಯಾರನ್ನು ಬೇಕಾದರೂ ಕೇಳಿ ನೋಡಿ, ಚೀನಾದವರು ಅತಿಕ್ರಮಣ ನಡೆಸಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ಇಲ್ಲಿ ಒಪ್ಪಿಕೊಳ್ಳುತ್ತಾರೆ. ಆದರೆ ನಮ್ಮ ಪ್ರಧಾನಿ ಮತ್ತೊಮ್ಮೆ ‘ಚೀನಾದ ಅತಿಕ್ರಮಣ ನಡೆದಿಲ್ಲ’ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳುತ್ತಾರೆ.

ಇನ್ನುಳಿದ ವಿಡಿಯೋಗಳಲ್ಲಿ ಮಾತನಾಡುವ ಲಡಾಖ್ ನಿವಾಸಿಗಳು, “ಮೋದಿ ಸರಕಾರದ ವೈಫಲ್ಯದಿಂದ ಗಡಿಭಾಗದಲ್ಲಿ ಅತಿಕ್ರಮಣ ನಡೆದಿದೆ. ರಕ್ಷಣಾ ಮಂತ್ರಿ ಏನೋ ಹೇಳುತ್ತಾರೆ, ಪ್ರಧಾನಿ ಏನೋ ಹೇಳುತ್ತಾರೆ, ಮಾಧ್ಯಮಗಳು ಇಲ್ಲಿಂದ ವರದಿ ಮಾಡಿ ಗಡಿಭಾಗ ಎನ್ನುತ್ತಿದೆ. ಲಡಾಕ್ ನಲ್ಲಿ ಅತಿಕ್ರಮಣ ನಡೆದಿಲ್ಲ ಎಂದಾದರೆ 20 ಯೋಧರು ಹುತಾತ್ಮರಾಗಿದ್ದು ಹೇಗೆ?, ಮೋದಿಯವರು ಅತಿಕ್ರಮಣ ನಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ಲಡಾಖಿಗಳಿಗೆ ಗೊತ್ತಿದೆ ಅಲ್ಲಿ ಸೈನಿಕರು ಹೇಗೆ ಹುತಾತ್ಮರಾಗಿದ್ದಾರೆ ಎನ್ನುವುದು. ಚೀನಾ ನಮ್ಮ ಗಡಿಯೊಳಕ್ಕೆ ನುಸುಳಿದೆ” ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News