ಹಝ್ರತ್ ಮೌಲಾನ ಮುಹಮ್ಮದ್ ಲುತ್ಫುಲ್ಲಾ ರಶಾದಿ ನಿಧನ

Update: 2020-06-27 12:28 GMT

ಬೆಂಗಳೂರು, ಜೂ.27: ಬೆಂಗಳೂರಿನ ಮಸ್ಜಿದ್-ಎ-ಖಾದ್ರಿಯಾದ ಖತೀಬ್-ಒ-ಇಮಾಮ್ ಮೌಲಾನ ಮುಹಮ್ಮದ್ ಲುತ್ಫುಲ್ಲಾ ಮಝ್ಹರಿ ರಶಾದಿ(69) ಶುಕ್ರವಾರ ರಾತ್ರಿ 9.30ರ ಸುಮಾರಿಗೆ ನಗರದಲ್ಲಿರುವ ತಮ್ಮ ಸಹೋದರಿಯ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಶನಿವಾರ ಲುಹರ್ ನಮಾಝ್ ಬಳಿಕ ಗೋವಿಂದಪುರದಲ್ಲಿರುವ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು) ಆವರಣದಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಜನಾಝ ನಮಾಝ್ ನೆರವೇರಿಸಿದರು. ಅಲ್ಲಿಯೆ ಲುತ್ಫುಲ್ಲಾ ರಶಾದಿ ಅವರ ಪಾರ್ಥಿವ ಶರೀರವನ್ನು ದಫನ್ ಮಾಡಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂ.15ರಂದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಜೂ.22ರಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್ ಬಂದಿತ್ತು.

ದಾರೂಲ್ ಉಲೂಮ್ ಸಬೀಲುರ್ರಶಾದ್‍ನ ಮುಖ್ಯಸ್ಥರಾಗಿದ್ದ ಮೌಲಾನ ಮುಹಮ್ಮದ್ ಅಶ್ರಫ್ ಅಲಿ ಅವರ ಸಹೋದರರಾಗಿದ್ದ ಲುತ್ಫುಲ್ಲಾ ರಶಾದಿ, ತಮ್ಮ ಸರಳ ಜೀವನ ಹಾಗೂ ಸ್ನೇಹಮಯ ಸ್ವಭಾವದಿಂದಾಗಿ ಜನ ಮನ್ನಣೆಗಳಿಸಿದ್ದರು. ಪ್ರತಿ ವರ್ಷ ಹಜ್ ಕ್ಯಾಂಪ್‍ನಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಿದ್ದರು.

"ಲುತ್ಫುಲ್ಲಾ ರಶಾದಿ ಅವರ ನಿಧನ ಕೇವಲ ನಮಗಷ್ಟೆ ಅಲ್ಲ, ಅವರ ಕುಟುಂಬ ಹಾಗೂ ಇಡೀ ಸಮುದಾಯಕ್ಕೆ ಅತ್ಯಂತ ದುಃಖದ ವಿಚಾರ. ಅವರು ತಮ್ಮ ಪ್ರವಚನಗಳ ಮೂಲಕ ಸಮುದಾಯಕ್ಕಾಗಿ ತಮ್ಮದೆ ಆದ ರೀತಿಯಲ್ಲಿ ಮಾರ್ಗದರ್ಶನ ಮಾಡಿದರು. ಕೇವಲ ಬೆಂಗಳೂರು ಅಷ್ಟೇ ಅಲ್ಲ, ನಮ್ಮ ರಾಜ್ಯ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ತಮ್ಮ ಪ್ರವಚನಗಳ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು" ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಸಬೀಲುರ್ರಶಾದ್ ಆವರಣದಲ್ಲಿ ಸಾರ್ವಜನಿಕರಿಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ರೋಷನ್ ಬೇಗ್, ಶಾಸಕರಾದ ನಸೀರ್ ಅಹ್ಮದ್, ರಿಝ್ವಾನ್ ಅರ್ಶದ್, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ಉಲಮಾಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News