ಬೆಂಗಳೂರು: 23 ಪೌರ ಕಾರ್ಮಿಕರು ಸೇರಿ 596 ಮಂದಿಗೆ ಕೊರೋನ ದೃಢ

Update: 2020-06-27 16:06 GMT

ಬೆಂಗಳೂರು, ಜೂ.27: ನಗರದಲ್ಲಿ ಶನಿವಾರ ದಾಖಲೆಯ 596 ಕೊರೋನ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನ ಜನರಲ್ಲಿ ಆತಂಕ ಹೆಚ್ಚಿಸಿದೆ.

ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ 2,531ಕ್ಕೆ ಏರಿಕೆಯಾಗಿದೆ. ಶನಿವಾರ ಮೂರು ಜನರು ಮೃತರಾಗಿದ್ದು, 125 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 1,124 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 84 ಜನರು ಸೋಂಕಿಗೆ ಬಲಿಯಾಗಿದ್ದು, ಶನಿವಾರ 7 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 16,688 ವ್ಯಕ್ತಿಗಳಿಗೆ ಕೊರೋನ ತಪಾಸಣೆ ಮಾಡಲಾಗಿದೆ.

ಮಹಾಲಕ್ಷ್ಮೀ ಲೇಔಟ್ ಗೂ ಕಾಲಿಟ್ಟ ಕೊರೋನ: ಮಹಾಲಕ್ಷ್ಮೀ ಬಡಾವಣೆಯ ನಾಗಪುರ ವಾರ್ಡ್‍ನಲ್ಲಿ ವಾಸವಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆತನನ್ನು ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತ ವ್ಯಕ್ತಿ ವಾಸವಿದ್ದ ನಿವಾಸವನ್ನು ಸ್ಯಾನಿಟೈಸ್ ಮಾಡಿದ್ದು, ಇಡೀ ರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಬಿಬಿಎಂಪಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೂ ಸೋಂಕು ಕಾಣಿಸಿಕೊಂಡಿದ್ದು, ಎಚ್.ಸಿದ್ದಯ್ಯ ರಸ್ತೆಯಲ್ಲಿರುವ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

23 ಪೌರ ಕಾರ್ಮಿಕರಿಗೆ ಕೊರೋನ

ನಗರ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿಬಿಎಂಪಿ 23 ಪೌರ ಕಾರ್ಮಿಕರಿಗೂ ಕೊರೋನ ದೃಢಪಟ್ಟಿದ್ದು, ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೌರ ಕಾರ್ಮಿಕರೊಂದಿಗೆ ಸಂಪರ್ಕವಿರಿಸಿಕೊಂಡಿದ್ದವರ ಪತ್ತೆ ಕಾರ್ಯಾಚರಣೆಯನ್ನು ಬಿಬಿಎಂಪಿ ಕೈಗೊಂಡಿದೆ.

54 ವರ್ಷದ ಪೌರ ಕಾರ್ಮಿಕರೊಬ್ಬರು ಕೊರೋನ ಸೋಂಕಿನಿಂದಾಗಿ ಜೆಜೆ ನಗರದಲ್ಲಿ ಮೃತಪಟ್ಟಿದ್ದರು. ಜೆಜೆ ನಗರ, ಪಂತರ ಪಾಳ್ಯ ಮತ್ತು ಇತರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ 80 ಮಂದಿ ಪೌರ ಕಾರ್ಮಿಕರ ಗಂಟಲು ದ್ರವ ಮಾದರಿ ಪರೀಕ್ಷೆಗೆ ನಡೆಸಲಾಗಿದೆ. ಇದರಲ್ಲಿ 23 ಮಂದಿಗೆ ಕೊರೋನ ಸೋಂಕು ಕಂಡುಬಂದಿದೆ. ನಗರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರ ಕಾರ್ಮಿಕರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಲು ಬಿಬಿಎಂಪಿ ನಿರ್ಧರಿಸಿದೆ.

4.84 ಲಕ್ಷ ರೂ. ದಂಡ

ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸದೆ ಇರುವವರಿಂದ ಬಿಬಿಎಂಪಿ ಒಟ್ಟು 4.84 ಲಕ್ಷ ರೂ. ದಂಡ ಸಂಗ್ರಹಿಸಿದೆ. ಕೊರೋನ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಂದ ಮಾರ್ಷಲ್‍ ಗಳು ದಂಡ ಸಂಗ್ರಹಿಸುತ್ತಿದ್ದು, ಬುಧವಾರ ಮಾಸ್ಕ್ ಧರಿಸದ 2,280 ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದ 140 ಮಂದಿ ಸೇರಿದಂತೆ 2,420 ಮಂದಿಯಿಂದ ಒಟ್ಟು 4.84 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News