ಬೆಂಗಳೂರು: ಐದು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ

Update: 2020-06-27 16:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.27: ಬೀದಿ ನಾಯಿಗಳ ಹಾವಳಿ ಮತ್ತೆ ಶುರುವಾಗಿದ್ದು, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವಿಜ್ಞಾನಗರ ವಾರ್ಡ್ ನ ವಿಭೂತಿಪುರ ಕೆರೆ ಅಂಗಳದಲ್ಲಿ ಐದೂವರೆ ವರ್ಷದ ಬಾಲಕಿ ಮೇಲೆ ದಾಳಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜೂನ್ 25ರಂದು ವಿಭೂತಿಪುರ ಕೆರೆ ಆವರಣದಲ್ಲಿ ಬೆಳಗ್ಗೆ 9ರ ವೇಳೆಯಲ್ಲಿ ತಂದೆ ಜೊತೆ ವರದಾ ಎಂಬ ಐದೂವರೆ ವರ್ಷದ ಬಾಲಕಿ ಮೇಲೆ ಏಕಾಏಕಿ ಆರು ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದ ಆಕೆಗೆ ತೀವ್ರತರವಾದ ಗಾಯಗಳಾಗಿವೆ. ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ.

ಈ ಬೀದಿ ನಾಯಿಗಳು ಬಿಇಎಂಎಲ್‍ಗೆ ಸೇರಿದ ಜಾಗದಲ್ಲಿ ಅಳವಡಿಸಲಾಗಿರುವ ಬೇಲಿಯ ಮೂಲಕ ಕೆರೆ ಅಂಗಳಕ್ಕೆ ಬರುತ್ತಿವೆ. ಜೂನ್ 25ರಂದು ಇದೇ ಜಾಗದಿಂದ ಕೆರೆ ಅಂಗಳಕ್ಕೆ ಬಂದ ಇವುಗಳು ತಂದೆಯ ಎದುರಿನಲ್ಲೇ ಬಾಲಕಿ ಮೇಲೆ ಏಕಾಏಕಿ ದಾಳಿ ಮಾಡಿ ಗಾಯ ಮಾಡಿವೆ.

ಇದೇ ಜಾಗದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಬೀದಿ ನಾಯಿಗಳು ದಾಳಿ ಮಾಡಿವೆ. ಬೀದಿ ನಾಯಿಗಳ ದಾಳಿಯಿಂದ ಮಗು ಸಾವನ್ನಪ್ಪಿರುವುದು ಇನ್ನೂ ಈ ಭಾಗದ ಜನರ ಮನಸ್ಸಿನಿಂದ ದೂರವಾಗಿಲ್ಲ. ಈಗ ಮತ್ತೆ ಬೀದಿ ನಾಯಿಗಳ ಹಾವಳಿ ಮುಂದುವರಿದಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.

ಬೀದಿ ನಾಯಿಗಳ ಹಾವಳಿ ಕುರಿತಂತೆ ಪದೇ ಪದೇ ಬಿಬಿಎಂಪಿಗೆ ದೂರು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಬರುವ ಸಿಬ್ಬಂದಿ ಕೆಲವು ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಒಂದು ವಾರದೊಳಗೆ ಅವು ಮತ್ತೆ ಇದೇ ಪ್ರದೇಶದಲ್ಲಿ ಪ್ರತ್ಯಕ್ಷವಾಗುತ್ತಿವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ ಬೀದಿ ನಾಯಿಗಳ ವಿಷಯದಲ್ಲಿ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಬೀದಿ ನಾಯಿಗಳಿಗೆ ಏನಾದರೂ ಮಾಡಿದರೆ ಪ್ರಾಣಿದಯಾ ಸಂಘಗಳು ವಿರೋಧ ವ್ಯಕ್ತಪಡಿಸುತ್ತವೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News