ಬೆಂಗಳೂರು: ಕೊರೋನ ಲಸಿಕೆ ನೆಪದಲ್ಲಿ 13 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು !

Update: 2020-06-27 17:54 GMT

ಬೆಂಗಳೂರು, ಜೂ.27: ಕೋವಿಡ್-19 ಸೋಂಕಿತರ ಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಗತಿಪರ ರಾಷ್ಟ್ರಗಳು ಲಸಿಕೆ ಕಂಡು ಹಿಡಿಯಲು ಲಿಕ್ವಿಡ್ ಅಗತ್ಯವಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 13 ಲಕ್ಷ ರೂ. ವಂಚನೆ ಮಾಡಿರುವ ಸೈಬರ್ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಇಲ್ಲಿನ ಶ್ರೀನಗರದ ನಿವಾಸಿ ಮತ್ತು ಖಾಸಗಿ ಕಂಪೆನಿಯೊಂದರಲ್ಲಿ ಲಿಕ್ವಿಡ್ ಸಂಬಂಧಿತ ವಸ್ತುಗಳ ಹಂಚಿಕೆದಾರರಾಗಿ ಕೆಲಸ ಮಾಡುತ್ತಿರುವ ಅಮರ್‍ನಾಥ್ ವಂಚನೆಗೊಳಗಾದವರು ಎಂದು ತಿಳಿದುಬಂದಿದೆ.

ಇತ್ತೀಚಿಗೆ ಅಮರನಾಥ್ ಅವರಿಗೆ ಟೆಲಿಗ್ರಾಮ್ ಆ್ಯಪ್ ಮೂಲಕ ಅಮೆರಿಕದಲ್ಲಿ ಏರೋನಿಕ್ಸ್ ಪಿಎಲ್‍ಸಿ ಕಂಪೆನಿ ಕೊರೋನ ವ್ಯಾಧಿಗೆ ಔಷಧಿ ಕಂಡು ಹಿಡಿಯುತ್ತಿದೆ. ಇದಕ್ಕಾಗಿ ಮೇಘಾಲಯದ ಪೂಜಾ ಹರ್ಬಲ್ ಕಂಪೆನಿಯಿಂದ ಸಿಗುವ ಲಿಕ್ವಿಡ್ ಖರೀದಿಸಿ ಯುಕೆ ಕಂಪೆನಿಗೆ ಸರಬರಾಜು ಮಾಡಿದರೆ, ಹೆಚ್ಚುವರಿ ಹಣ ನೀಡುವುದಾಗಿ ಸಂದೇಶ ಹರಿಬಿಟ್ಟಿದ್ದಾರೆ.

ನಿಜ ಎಂದು ನಂಬಿ ಅಮರನಾಥ್ ಪೂಜಾ ಹರ್ಬಲ್ ಕಂಪೆನಿಗೆ ಕರೆ ಮಾಡಿ ನಿಮ್ಮಲ್ಲಿರುವ ಲಿಕ್ವಿಡ್ ಮೆಟಿರಿಯಲ್ಸ್ ಖರೀದಿಸುವುದಾಗಿ ಹೇಳಿದ್ದಾರೆ.

ಪೂರ್ವ ಸಂಚಿನಂತೆ ಹರ್ಬಲ್ ಕಂಪೆನಿಯ ಮಾಲಕರಂತೆ ನಟಿಸಿ ಲಿಕ್ವಿಡ್ ಕಳುಹಿಸಲು ಮುಂಗಡವಾಗಿ ಹಣ ನೀಡುವಂತೆ ಹೇಳಿದ್ದು, ಇದರಂತೆ ಪ್ರಾರಂಭಿಕ ಹಂತದಲ್ಲಿ 3 ಲಕ್ಷ ನೀಡಿ 150 ಗ್ರಾಂ. ಲಿಕ್ವಿಡ್ ಖರೀದಿಸಿ ಯುಕೆ ಕಂಪೆನಿಗೆ ಕಳುಹಿಸಿದ್ದಾರೆ. ನೀವು ಕಳುಹಿಸಿರುವ ಲಿಕ್ವಿಡ್ ಗುಣಮಟ್ಟವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಮೆಟಿರಿಯಲ್ಸ್ ಕಳುಹಿಸಲು ಕಂಪೆನಿ ಒಪ್ಪಿದೆ ಎಂದು ಅಮರ್‍ನಾಥ್‍ಗೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬಳಿಕ ದೊಡ್ಡ ಮಟ್ಟದಲ್ಲಿ ಲಿಕ್ವಿಡ್ ಖರೀದಿಸಲು ಪೂಜಾ ಹರ್ಬಲ್ ಕಂಪೆನಿಗೆ ಮುಂಗಡವಾಗಿ ಅಮರ್‍ನಾಥ್ 13 ಲಕ್ಷ ನೀಡಿದ್ದಾರೆ. ಕೆಲ ದಿನಗಳ ಬಳಿಕ ಲಿಕ್ವಿಡ್ ಸರಬರಾಜಿಗೆ ನೀಡಿದ ಮುಂಗಡ ಹಣ ಸಾಲುತ್ತಿಲ್ಲ. ಮತ್ತೆ ಹಣ ಕಳುಹಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಅನುಮಾನಗೊಂಡು ದಿಲ್ಲಿಯಲ್ಲಿರುವ ಯುಕೆ ರಾಯಭಾರಿ ಕಚೇರಿಗೆ ಅಮರ್‍ನಾಥ್ ಪತ್ರ ಬರೆದಿದ್ದಾರೆ. ಇದರಿಂದ ಎಚ್ಚೆತ್ತ ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ.

ಈ ಸಂಬಂಧ ನಗರದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್‍ಠಾಣೆಗೆ ದೂರು ನೀಡಲಾಗಿದೆ. ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News