ಎಸೆಸೆಲ್ಸಿ ಪರೀಕ್ಷೆ: ಮಕ್ಕಳ-ಪೋಷಕರ ಗಟ್ಟಿತನದ ಪ್ರತೀಕ- ಸಚಿವ ಸುರೇಶ್‍ ಕುಮಾರ್

Update: 2020-06-27 18:03 GMT

ಬೆಂಗಳೂರು, ಜೂ.27: ಮೂರನೇ ದಿನವಾದ ಶನಿವಾರ ನಡೆದ ಎಸೆಸೆಲ್ಸಿ ಗಣಿತ ವಿಷಯ ಪರೀಕ್ಷೆಯು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿರುವುದು ಮಕ್ಕಳ ಮತ್ತು ಪೋಷಕರ ಗಟ್ಟಿತನವನ್ನು ಎತ್ತಿತೋರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಪರೀಕ್ಷೆಯ ನಂತರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆ ಕುರಿತ ಮಾಹಿತಿ ನೀಡಿದ ಅವರು, ಮೂರನೇ ದಿನವಾದ ಶನಿವಾರ ನಡೆದ ಗಣಿತ ವಿಷಯ ಪರೀಕ್ಷೆಗೆ ನೋಂದಾಯಿತ 8,08,650 ವಿದ್ಯಾರ್ಥಿಗಳ ಪೈಕಿ 7,91,987 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 97.93ರಷ್ಟು ಇಂದು ಹಾಜರಾತಿ ಇದೆ. 16,663 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.

ಈ ಪರೀಕ್ಷೆಗೆ ಕಳೆದ 2018-19ನೇ ಸಾಲಿಗೆ 8,03,949 ವಿದ್ಯಾರ್ಥಿಗಳ ಪೈಕಿ 7,93,353 ವಿದ್ಯಾರ್ಥಿಗಳು ಹಾಜರಾಗಿದ್ದು, 10,596 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.68 ಹಾಜರಾತಿ ಇತ್ತು ಎಂದು ಅವರು ಹೇಳಿದರು.

ಮೊದಲ ಬಾರಿಗೆ 7,44,901 ಶಾಲಾ ವಿದ್ಯಾರ್ಥಿಗಳು ಹಾಗೂ 20,923 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್ಮೆಂಟ್ ಪ್ರದೇಶಗಳ 2048 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 292 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ 6 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಸರಕಾರಿ ಹಾಗೂ ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 659 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 59 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 600 ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 12,539 ವಿದ್ಯಾರ್ಥಿಗಳು ಹಾಜರಾಗಿದ್ದರೆ, 105 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸುರೇಶ್‍ಕುಮಾರ್ ತಿಳಿಸಿದರು.

ಹೋಂ ಕ್ವಾರಂಟೈನಲ್ಲಿ 57 ವಿದ್ಯಾರ್ಥಿಗಳಿದ್ದಾರೆ. ಕೋವಿಡ್ ಪಾಸಿಟೀವ್ ಎಂದು 25 ವಿದ್ಯಾರ್ಥಿಗಳು ಗುರುತಿಸಲ್ಪಟ್ಟಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರು ಪೂರ್ವ ಹಾಗೂ ದಕ್ಷಿಣ ಜಿಲ್ಲೆಗಳಿಗೆ ಸೇರಿದ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು ಎಂದು ಸುರೇಶ್‍ ಕುಮಾರ್ ತಿಳಿಸಿದ ಅವರು ಇಂದಿನ ಪರೀಕ್ಷೆಗೆ ಸಂಬಂಧಿಸಿದ ಹಲವಾರು ಪ್ರಮುಖ ಅಂಶಗಳನ್ನು ವಿವರಿಸಿದರು.

ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಗಣಿತ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದೆ ಬಾಕಿ ಇರುವ ಪರೀಕ್ಷೆಗಳ ಯಶಸ್ಸಿಗೂ ಅವರ ಬದ್ಧತೆ ಇದೇರೀತಿ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ವಿಶ್ವಾಸವಿಟ್ಟುಕೊಳ್ಳಬೇಕೆಂದು ಸುರೇಶ್‍ ಕುಮಾರ್ ಮನವಿ ಮಾಡಿದರು.

ಜೂ.25 ರಂದು ನಡೆದ ಎಸೆಸೆಲ್ಸಿ ದ್ವಿತೀಯ ಆಂಗ್ಲ ಭಾಷಾ ಪರೀಕ್ಷೆಯಲ್ಲಿ ಜಿಲ್ಲಾಡಳಿತ ನೇಮಿಸಿದ ಹಿಂದುಳಿದ ವರ್ಗಗಳ ಇಲಾಖಾ ವಿಸ್ತರಣಾಧಿಕಾರಿ ವೀಕ್ಷಕರಾಗಿದ್ದರು. ಅವರು ಪಾವಗಡ ತಾಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಗೆ ಪರಿಶೀಲನೆಗೆ ಹೋದಾಗ ಕೇಂದ್ರದ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ಕುಳಿತು ಚರ್ಚಿಸಿ ವಾಪಾಸಾಗಿದ್ದರು. ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿರಲಿಲ್ಲ. ಅವರಿಗೆ ಜೂ. 26ರ ಶುಕ್ರವಾರ ಸಂಜೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಆ ಕೇಂದ್ರದ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಲಾಯಿತು. ಮುಖ್ಯಅಧೀಕ್ಷಕರ ಕಚೇರಿ ಸೇರಿದಂತೆ ಎಲ್ಲ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಿ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News