×
Ad

ಕೆರೆ ನಿರ್ಮಾತೃ ಕಲ್ಮನೆ ಕಾಮೇಗೌಡರನ್ನು ಮನ್ ಕಿ ಬಾತ್ ನಲ್ಲಿ ಪ್ರಶಂಸಿಸಿದ ಪ್ರಧಾನಿ ಮೋದಿ

Update: 2020-06-28 12:05 IST

ಬೆಂಗಳೂರು, ಜೂ.28: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ ಅವರ ಕಾಯಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರವಿವಾರದ ಮನ್ ಕಿ ಬಾತ್ ನಲ್ಲಿ ಶ್ಲಾಘಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡ ಅವರದ್ದು ಕಾಡಿನಲ್ಲಿ ಕುರಿ ಮೇಯಿಸೋದೇ ಇವರ ಕಾಯಕ. ಹುಟ್ಟಿದಾಗಿನಿಂದಲೂ ಪರಿಸರದೊಂದಿಗೆ ತುಂಬಾ ಒಟನಾಡವಿಟ್ಟುಕೊಂಡಿರುವ ಅವರು ಪರಿಸರಕ್ಕಾಗಿ ಜೀವನವಿಡೀ ದುಡಿದ ಹಣವನ್ನೇ ಖರ್ಚು ಮಾಡಿದ್ದಾರೆ. ಇದುವರೆಗೂ 16 ಕೆರೆಗಳನ್ನು ನಿರ್ಮಿಸಿರುವ ಇವರು ವನ್ಯ ಜೀವಿಗಳಿಗೆ ಕುಡಿಯುವ ನೀರಿನ ‌ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಜಲ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ.

ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರಬೇಕೆಂದು ಬೆಟ್ಟ ಸುತ್ತ 2 ಸಾವಿರಕ್ಕೂ ಅಧಿಕ ಗಿಡ ನೆಟ್ಟು ಬೆಳೆಸಿದ್ದಾರೆ. ತಾನು ನೆಟ್ಟ ಆ ಸಸಿಗಳು ಇಂದು‌ ಮರವಾಗಿರುವುದನ್ನು ಕಂಡು ಆನಂದದಿಂದ ಸದಾ ಕಾಡಲ್ಲಿ ಸುತ್ತಾಡುತ್ತಾರೆ. ಜೊತೆಗೆ ಈತ ತನ್ನ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ.

ಯಾರು ಈ ಕಾಮೇಗೌಡ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು ಕಾವೇಗೌಡ. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿಯಾಗಿದ್ದಾರೆ. ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗಳು ಕಾಮೇಗೌಡರ ಆಸ್ತಿ.

ನೀರಿನ ದಾಹ ಕಂಡು ಕೆರೆ ನಿರ್ಮಾಣ

ಕಾಮೇಗೌಡರು ಕೆರೆಯನ್ನು ಕಟ್ಟುವ ಕಾಯಕ ಕೈಗೊಳ್ಳಲು ಪ್ರಾಣಿಗಳ ನೀರಿನ ದಾಹವೇ ಕಾರಣ. ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿಗಳನ್ನು ಮೇಯಿಸಲು ಹೋದಾಗ ವಿಪರೀತ ದಾಹವಾಗಿತ್ತು. ಎಲ್ಲಿ ಹುಡುಕಿದರೂ ಒಂದು ಹನಿ ನೀರು ಸಿಗಲಿಲ್ಲ. ತುಸು ದೂರದಲ್ಲಿದ್ದ ಮನೆಗೆ ಹೋಗಿ ಅವರು ದಾಹ ಇಂಗಿಸಿಕೊಂಡರು. ಆಗ ಅವರು ನಮ್ಮ ದಾಹ ತೀರಿತು ಪ್ರಾಣಿಗಳ ಕಥೆ ಏನು ಎಂದು ಚಿಂತಿಸಿದರು. ಅದರ ಫಲವಾಗಿಯೇ ಇದುವರೆಗೆ 16ಕ್ಕೂ ಹೆಚ್ಚು ಕೆರೆ ಕಟ್ಟಿಸಿದ್ದಾರೆ.

ಹುಚ್ಚ ಎಂದು ಜರಿದಿದ್ದರು...

ಕುರಿ ಮೇಯಿಸುವ ಜೊತೆಗೆ ಕರೆ ನಿರ್ಮಾಣ ಮಾಡುವೆ ಎಂದು ಗುದ್ದಲಿ ಹಿಡಿದು ಕೆಲಸ ಮಾಡುವ ಕಾಮೇಗೌಡರನ್ನು ನೋಡಿ ಜನರು, ಸಂಬಂಧಿಕರು ಹುಚ್ಚ ಎಂದು ಜರಿದಿದ್ದರು. ರಾತ್ರಿ ಚಂದ್ರ, ದೀಪದ ಬೆಳಕಿನಲ್ಲಿಯೂ ಗುಡ್ಡದಲ್ಲಿ ಕೆರೆ ನಿರ್ಮಾಣ ಮಾಡಲು ಕಾಮೇಗೌಡರು ಕೆಲಸ ಮಾಡಿದ ಉದಾಹರಣೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News