ಕೊರೋನ ಸಮುದಾಯಕ್ಕೆ ಹಬ್ಬಿರುವ ಬಗ್ಗೆ ಮೂರು ದಿನಗಳಲ್ಲಿ ತಜ್ಞರ ವರದಿ: ಸಚಿವ ಆರ್.ಅಶೋಕ್

Update: 2020-06-28 12:31 GMT

ಬೆಂಗಳೂರು, ಜೂ. 28: ಬೆಂಗಳೂರು ನಗರದಲ್ಲಿ ಕೊರೋನ ಸೋಂಕು ಸಮುದಾಯಕ್ಕೆ ಹರಡಿರುವ ಸಂಶಯಗಳ ಹಿನ್ನೆಲೆಯಲ್ಲಿ ಈ ಸಂಬಂಧ ವರದಿ ನೀಡುವಂತೆ ತಜ್ಞರಿಗೆ ಸೂಚಿಸಲಾಗಿದ್ದು, ಇನ್ನೂ ಮೂರು ದಿನಗಳಲ್ಲಿ ವರದಿ ಬರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ಸಮುದಾಯಕ್ಕೆ ಹರಡಿರುವ ಬಗ್ಗೆ ತಜ್ಞರು ಸಮೀಕ್ಷೆ ನಡೆಸಲಿದ್ದು, ವರದಿ ನೀಡಲಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ನಿನ್ನೆ ಒಂದೇ ದಿನದಲ್ಲಿ 596 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಷ್ಟು ದೊಡ್ಡ ಸಂಖ್ಯೆಯಲ್ಲಿನ ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟ ಬಗ್ಗೆ ಪರಿಶೀಲನೆ ನಡೆಸಿ ತಜ್ಞರು ವರದಿ ನೀಡಲಿದ್ದಾರೆ ಎಂದ ಅವರು, ಒಂದೆರಡು ದಿನಗಳಲ್ಲಿ ಈ ಬಗ್ಗೆ ನಿಖರವಾದ ಕಾರಣ ಗೊತ್ತಾಗಲಿದೆ. ಈ ವಿಚಾರದಲ್ಲಿ ಮುಚ್ಚಿಡುವಂತಹದ್ದು ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಿಸುವುದು ನಮ್ಮ ಮುಖ್ಯ ಉದ್ದೇಶ. ಹೀಗಾಗಿ ಎಲ್ಲ ಪ್ರಯತ್ನಗಳನ್ನು ಸರಕಾರ ನಡೆಸಿದೆ. ಆಯುರ್ವೇದ ಚಿಕಿತ್ಸೆಯ ಬಗ್ಗೆಯೂ ಗಂಭೀರವಾಗಿ ಚರ್ಚೆ ನಡೆಸಲಾಗಿದೆ. ಮೌಖಿಕವಾಗಿ ಕೆಲಸ ತೀರ್ಮಾನಗಳನ್ನು ಮಾಡಲಾಗಿದೆ ಎಂದ ಅಶೋಕ್, ಕೊರೋನ ವಾರಿಯರ್ಸ್ ಗಳ ರಕ್ಷಣೆಗೆ ಆಸ್ಥೆ ವಹಿಸಲಾಗಿದೆ ಎಂದರು.

ಉತ್ತಮ ಆಹಾರ ವ್ಯವಸ್ಥೆ: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಸೋಂಕಿತರಿಗೆ ಆಹಾರ ಪೂರೈಕೆ ಬಗ್ಗೆ ಕೆಲ ದೂರುಗಳ ಹಿನ್ನೆಲೆಯಲ್ಲಿ ಖುದ್ದು ನಾನೇ ಪರಿಶೀಲನೆ ನಡೆಸಿದ್ದು, ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಕ್ರಮ ವಹಿಸಲಾಗಿದೆ. ಸೋಂಕಿತರು ಶೀಘ್ರವಾಗಿ ಚೇತರಿಸಿಕೊಳ್ಳಲು ಉತ್ತಮ ಆಹಾರ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಕಾಯ್ದಿರಿಸುವುದಕ್ಕೆ ಸಂಬಂಧಪಟ್ಟಂತೆ ಆದೇಶ ಹೊರಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಲಭ್ಯವಾಗಲಿವೆ ಎಂಬುದು ಗೊತ್ತಾಗಲಿದೆ. ಇದರಿಂದ ಸೋಂಕಿತರ ಚಿಕಿತ್ಸೆಗೆ ತ್ವರಿತವಾಗಿ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

ಟ್ಯಾಗ್ ವ್ಯವಸ್ಥೆ

ಕೊರೋನ ಸೋಂಕಿತರು ಮತ್ತು ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳಿಗೆ `ಟ್ಯಾಗ್' ಕಟ್ಟುವ ಹೊರ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಅವರ ಚಲನವಲನಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ. ಟ್ಯಾಗ್ ತೆರವು ಮಾಡಲು ಪ್ರಯತ್ನಿಸಿದರೆ ಅಲರಾಂ ಸೈರನ್ ಬರುತ್ತದೆ. ಇನ್ನೂ ಕೆಲ ದಿನಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ'

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News