ರಾಜ್ಯ ರಾಜಧಾನಿಯಲ್ಲಿ ಕೊರೋನ ಕೋಲಾಹಲ: ಒಂದೇ ದಿನ 783 ಮಂದಿಗೆ ಪಾಸಿಟಿವ್, ಮತ್ತೆ ನಾಲ್ವರು ಬಲಿ
ಬೆಂಗಳೂರು, ಜೂ.28: ನಗರದಲ್ಲಿ ರವಿವಾರ ಹೊಸದಾಗಿ 783 ಕೊರೋನ ಸೋಂಕಿನ ಪ್ರಕರಣ ದೃಢಪಟ್ಟಿದ್ದು, ಬಿಬಿಎಂಪಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗೆ ಸೋಂಕು ತಗಲಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ರವಿವಾರ ದಾಖಲೆಯ 783 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿಗೆ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟಾರೆ ಕೊರೋನ ಸೋಂಕಿತರ ಸಂಖ್ಯೆ 3,321ಕ್ಕೆ ಏರಿಕೆಯಾಗಿದ್ದು, 155 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದಲ್ಲಿ 2,692 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 88 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 17,012 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಜೆ.ಜೆ. ನಗರದ ಕಾರ್ಪೋರೇಟರ್ ಗೆ ಕೊರೋನ
ಜೆ.ಜೆ. ನಗರದ ಕಾರ್ಪೋರೇಟರ್ ಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೆ.ಜೆ ನಗರ ವಾರ್ಡ್ ಸದಸ್ಯರು ವಾರ್ಡ್ ನಲ್ಲಿ ಮತದಾರರೊಂದಿಗೆ ಬೆರೆತು ಮಾತನಾಡಿದ್ದರು. ಅ ವೇಳೆ ಅವರಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಅವರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಶನಿವಾರ ಅವರಿಗೆ ಕೊರೋನ ಇರುವುದು ದೃಢಪಟ್ಟಿತ್ತು. ಕೂಡಲೇ ಅವರನ್ನು ಸಂಪರ್ಕ ಮಾಡಿದ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಅವರನ್ನು ವಿಕ್ಟೋರಿಯಾ ಆಸತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಬಿಎಂಪಿ ಸದಸ್ಯೆಯ ಜೊತೆ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ.
485 ಕಂಟೈನ್ಮೆಂಟ್ ವಲಯ
ನಗರದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿದ್ದು, ಕಂಟೈನ್ಮೆಂಟ್ ವಲಯಗಳೂ ಹೆಚ್ಚಳವಾಗಿವೆ. 198 ವಾರ್ಡ್ ಗಳಿಗೂ ಸೋಂಕು ಹರಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜೂ. 20 ರಂದು 437 ಕಂಟೈನ್ಮೆಂಟ್ ವಲಯಗಳಿದ್ದು, ಶನಿವಾರ ವೇಳೆಗೆ 485 ವಲಯ ಗುರುತಿಸಲಾಗಿದೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಸೋಂಕಿತರು ಇರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರದ ಮೆನು ಬದಲಾವಣೆ
ಪ್ರತಿದಿನ ಚಪಾತಿ, ಪಲ್ಯ, ಅನ್ನ, ಸಾಂಬರ್, ಮೊಸರು, ತುಪ್ಪ ನೀಡುವ ಜೊತೆಗೆ ಹಣ್ಣುಗಳನ್ನು ನೀಡಬೇಕು. ಬೆಂಗಳೂರಿನ ಎಲ್ಲಾ ಕೊರೋನ ಆಸ್ಪತ್ರೆಯಲ್ಲಿ ಊಟದ ಮೆನು ಸರಿಯಾಗಿ ಪಾಲನೆ ಮಾಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ..