ಉಪವಾಸಕ್ಕಿಂತ ಕೊರೋನ ವೈರಸ್ ಉತ್ತಮ: ಉ.ಪ್ರದೇಶದ ಲಕ್ಷಾಂತರ ವಲಸೆ ಕಾರ್ಮಿಕರ ಅಳಲು

Update: 2020-06-28 15:33 GMT

ಲಕ್ನೊ, ಜೂ.28: ಕೊರೋನ ವೈರಸ್ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್ ಸಂದರ್ಭ ಹರಸಾಹಸ ಪಟ್ಟು ತಮ್ಮ ಸ್ವಂತ ಗ್ರಾಮಕ್ಕೆ ವಾಪಸಾಗಿದ್ದ  ಉತ್ತರಪ್ರದೇಶದ 30 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು, ಈಗ ಸೋಂಕು ಉಲ್ಬಣಗೊಂಡಿರುವ ಸಮಯದಲ್ಲೇ ಮತ್ತೆ ಅನ್ಯರಾಜ್ಯದತ್ತ ತೆರಳಲು ಮುಂದಾಗಿದ್ದಾರೆ. ‘ಉಪವಾಸಕ್ಕಿಂತ ಕೊರೋನ ಸೋಂಕು ಉತ್ತಮ ಎಂದುಕೊಂಡು ಹೀಗೆ ಮಾಡುತ್ತಿರುವುದಾಗಿ’ ಕಾರ್ಮಿಕರು ಹೇಳುತ್ತಿದ್ದಾರೆ.

ಮಹಾರಾಷ್ಟ್ರ, ಗುಜರಾತ್ ಮತ್ತಿತರ ಉದ್ಯಮ ನಗರಗಳಿಗೆ ತೆರಳುವ ರೈಲಿಗಾಗಿ ಸಾವಿರಾರು ಕಾರ್ಮಿಕರು ಈಗ ಗೋರಖ್‌ಪುರ ಸಹಿತ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕಾಯುತ್ತಿದ್ದಾರೆ. ಮುಂಬೈಯಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಖುರ್ಷೀದ್ ಅನ್ಸಾರಿ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು ಈಗ ಮತ್ತೆ ಮುಂಬೈಯತ್ತ ಮುಖ ಮಾಡಿದ್ದಾರೆ.

“ಲಾಕ್‌ಡೌನ್ ಜಾರಿಯಾದಂದಿನಿಂದ ಕೆಲಸವಿಲ್ಲದೆ ಇಕ್ಕಟ್ಟಿನಲ್ಲಿ ಸಿಲುಕಿದ್ದೆ. ಕಡೆಗೂ ತಿಂಗಳ ಹಿಂದೆ ಉತ್ತರಪ್ರದೇಶಕ್ಕೆ ವಾಪಸಾದೆ. ಆದರೆ ಇಲ್ಲಿ ಕೆಲಸವೇ ಇಲ್ಲ. ಮುಂಬೈಯಲ್ಲಿದ್ದ ಗಾರ್ಮೆಂಟ್ ಫ್ಯಾಕ್ಟರಿ ಆರಂಭವಾಗಿಲ್ಲ. ಆದರೂ ಇಲ್ಲಿದ್ದು ಉಪವಾಸ ಬೀಳುವುದಕ್ಕಿಂತ ಮುಂಬೈಗೆ ತೆರಳಿ ಏನಾದರೊಂದು ಕೆಲಸ ಮಾಡಿ ನನ್ನ ಕುಟುಂಬದ ಹೊಟ್ಟೆ ತುಂಬಿಸುವ ವಿಶ್ವಾಸವಿದೆ. ಉಪವಾಸಕ್ಕಿಂತ ಕೊರೋನ ಉತ್ತಮ. ಮಕ್ಕಳು ಉಪವಾಸದಿಂದ ಸಾಯುವ ಬದಲು ನಾನು ಕೊರೋನ ವೈರಸ್‌ನಿಂದ ಸಾಯುವುದು ಒಳ್ಳೆಯದು” ಎಂದು ಅನ್ಸಾರಿ ಹೇಳಿದ್ದಾರೆ.

ಕೋಲ್ಕತಾದ ಸಂಸ್ಥೆಯೊಂದರಲ್ಲಿ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದ ಪ್ರಸಾದ್ ಹೋಳಿ ಹಬ್ಬಕ್ಕೆಂದು ಲಕ್ನೋದ ಮನೆಗೆ ಬಂದವರು ಲಾಕ್‌ಡೌನ್‌ನಿಂದ ಅಲ್ಲೇ ಸಿಕ್ಕಿಬಿದ್ದಿದ್ದರು. ಕೋಲ್ಕತಾದಲ್ಲಿ ಕೊರೋನ ಸೋಂಕು ಹೆಚ್ಚಿದೆ. ಆದರೆ ಕುಟುಂಬದ ಹೊಟ್ಟೆಪಾಡಿಗೆ ಕೆಲಸ ಮಾಡುವುದು ಅನಿವಾರ್ಯ. ಆದ್ದರಿಂದ ವಾಪಸು ತೆರಳುತ್ತಿದ್ದೇನೆ ಎಂದವರು ಹೇಳಿದ್ದಾರೆ.

ಉತ್ತರಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯಿಂದ ಅತ್ಯಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ವಾಪಸಾಗುತ್ತಿದ್ದಾರೆ. ರಾಜ್ಯ ಸರಕಾರ ಎಂನರೇಗಾ (ಗ್ರಾಮೀಣ ಉದ್ಯೋಗ ಖಾತರಿ )ಯೋಜನೆಯಡಿ ವಲಸೆ ಕಾರ್ಮಿಕರಿಗೆ ಕೆಲಸ ಒದಗಿಸುತ್ತಿದೆ ಎಂದು ಹೇಳಿದ್ದರೂ ತಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಬಹುತೇಕ ವಲಸೆ ಕಾರ್ಮಿಕರು ಹೇಳಿದ್ದಾರೆ. ಮುಂಬೈಯಲ್ಲಿ ಒಳ್ಳೆಯ ಸಂಬಳ ಸಿಗುತ್ತದೆ. ಆದರೆ ಇಲ್ಲಿ ಸಿಗುವುದಿಲ್ಲ. ಸರಕಾರದ ಯಾವುದೇ ಯೋಜನೆ ಅಥವಾ ಭರವಸೆ ನಮ್ಮನ್ನು ತಲುಪಿಲ್ಲ. ಈಗ ನಮ್ಮ ಊರಿನಲ್ಲಿ ನಿರುದ್ಯೋಗಿಯಾಗಿದ್ದೇನೆ. ಎಲ್ಲಿಯೂ ಕೆಲಸವಿಲ್ಲ. ಯಾರನ್ನು ಕೇಳಿದರೂ ಕೆಲಸವಿಲ್ಲ ಎನ್ನುತ್ತಿದ್ದಾರೆ. ಮುಂಬೈಯ ಪರಿಸ್ಥಿತಿ ತಿಳಿದಿದೆ. ಆದರೆ ಹೋಗುವುದು ಅನಿವಾರ್ಯ. ಹೊಟ್ಟೆಪಾಡಿಗೆ ಬೇರೆ ಗತಿಯಿಲ್ಲ ಎಂದು ಮುಂಬೈಯಲ್ಲಿ ಎಸಿ ಟೆಕ್ನೀಶಿಯನ್ ಆಗಿರುವ ಮುಹಮ್ಮದ್ ಅಬಿದ್ ಅಳಲು ತೋಡಿಕೊಂಡಿದ್ದಾರೆ.

ರಾಜ್ಯ ಸರಕಾರ ಪಡಿತರ ಸಾಮಗ್ರಿ ಬಿಟ್ಟು ಬೇರೇನನ್ನೂ ನೀಡುತ್ತಿಲ್ಲ. ಇತರ ಖರ್ಚು ವೆಚ್ಚ ನಿಭಾಯಿಸುವುದು ಹೇಗೆ ? ಎಂನರೇಗಾ ಬಿಟ್ಟರೆ ಬೇರೇನೂ ಕೆಲಸವಿಲ್ಲ ಎಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ದಿನಸಿ ಸಾಮಾಗ್ರಿಗಳ ಅಂಗಡಿಯನ್ನು ಬಾಡಿಗೆಗೆ ಪಡೆದಿರುವ ರಾಜೇಶ್ ಕುಮಾರ್ ವರ್ಮ ಹೇಳಿದ್ದು, ಅಂಗಡಿ ಬಂದ್ ಆಗಿದ್ದರೂ ಬಾಡಿಗೆ ಪಾವತಿಸಲೇಬೇಕು. ಆದ್ದರಿಂದ ಕೊರೋನ ಸೋಂಕಿನ ಅಪಾಯದ ಮಧ್ಯೆಯೇ ಗುಜರಾತ್‌ಗೆ ವಾಪಸಾಗುತ್ತಿದ್ದೇನೆ ಎಂದಿದ್ದಾರೆ.

ಎಲ್ಲರಿಗೂ ಕೆಲಸವಿದೆ: ಸರಕಾರದ ಹೇಳಿಕೆ

ಆದರೆ ರಾಜ್ಯ ಸರಕಾರ ಹೇಳುವುದೇ ಬೇರೆ. ಎಂನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ ಸಾರ್ವಕಾಲಿಕ ದಾಖಲೆಯಾಗಿದೆ. ಸಣ್ಣ ಉದ್ಯಮಗಳಲ್ಲಿ ಸುಮಾರು 60 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಲಾಗಿದೆ. ಕೆಲಸ ಮಾಡಲು ಮುಂದೆ ಬರುವವರಿಗೆ ಎಂನರೇಗಾದಡಿ ಯಾವತ್ತೂ ಅವಕಾಶವಿದೆ ಎಂದು ಉತ್ತರಪ್ರದೇಶ ಸರಕಾರ ಶನಿವಾರ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News