ಅನ್ವರ್ ಮಾಣಿಪ್ಪಾಡಿಗೆ ವಿಧಾನ ಪರಿಷತ್ ಸ್ಥಾನ ನೀಡಿ: ಕ್ರೈಸ್ತ ಸಮುದಾಯದ ನಿಯೋಗ ಆಗ್ರಹ

Update: 2020-06-28 18:00 GMT

ಬೆಂಗಳೂರು, ಜೂ.28: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನೇಮಿಸಲು ಬಿಜೆಪಿ ಮುಂದಾಗಬೇಕೆಂದು ಕ್ರೈಸ್ತ ಸಮುದಾಯದ ನಿಯೋಗ ಆಗ್ರಹಿಸಿದೆ.

ರವಿವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿಯೋಗದ ಪ್ರಮುಖರಾದ ಫಾದರ್ ಇಮ್ಯಾನುಯೆಲ್ ಮಾತನಾಡಿ, ಪ್ರಸ್ತುತ ಕರ್ನಾಟಕದ ವಿಧಾನ ಪರಿಷತ್ತಿ ಸದಸ್ಯ ಸ್ಥಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಗುರುತಿಸಿ ನಾಮ ನಿರ್ದೇಶನ ಮಾಡುತ್ತಿರುವ ಹಿನ್ನೆಲೆ ರಾಜ್ಯ ರಾಜಕೀಯ ಹಾಗೂ ಧರ್ಮಾತೀತವಾಗಿ ಸೇವೆ ಸಲ್ಲಿಸಿರುವ ಅನ್ವರ್ ಮಾಣಿಪ್ಪಾಡಿ ಅವರನ್ನು ಪರಿಷತ್ತಿನ ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ಮುಂದಾಗಬೇಕು ಎಂದರು.

ಬಿಜೆಪಿ ಪಕ್ಷದಲ್ಲಿ ಹಾಗೂ ವಿವಿಧ ನಿಗಮಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿರುವ ಅನ್ವರ್ ಮಾಣಿಪ್ಪಾಡಿ ಅವರು ಕ್ರೈಸ್ತ ಸಮುದಾಯದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ವಿವಿಧ ಯೋಜನೆಗಳು ಕೆಳವರ್ಗಗಳಿಗೆ ದೊರೆಯುವಂತೆ ಶ್ರಮವಹಿಸಿದ್ದಾರೆ. ಹೀಗಾಗಿ, ಅವರಿಗೆ ಪರಿಷತ್ತಿನಲ್ಲಿ ಸ್ಥಾನ ನೀಡಿ, ಈ ಸಮುದಾಯದ ಧ್ವನಿಯನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ನುಡಿದರು.

ಭೇಟಿ: ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಧಾನ ಪರಿಷತ್ತಿನ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಕ್ರೈಸ್ತ ಸಮುದಾಯದ ಮುಖಂಡರು ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ಫಾದರ್ ಇಮ್ಯಾನುಯೆಲ್ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೆಂಕಟೇಶ್ ನಾಯಕ್, ರಾಷ್ಟ್ರೀಯ ಇಸಾಯಿ ಮಹಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಜೋಸೆಫ್ ರವಿ, ಕರ್ನಾಟಕ ಕ್ರಿಶ್ಚಿಯನ್ ಫೋಂ ರಾಜ್ಯ ಉಪಾಧ್ಯಕ್ಷ ಶಾಂತಕುಮಾರ್ ಕೆನಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News