ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣ: ಸಿಎಂ ಯಡಿಯೂರಪ್ಪ

Update: 2020-06-29 11:47 GMT

ಬೆಂಗಳೂರು, ಜೂ. 29: ಚಿತ್ರನಟ ಡಾ.ಅಂಬರೀಷ್ ಅವರ ಸ್ಮಾರಕವನ್ನು ನಿರ್ಮಿಸಲು ಕಂಠೀರವ ಸ್ಟುಡಿಯೋ ಆವರಣದಲ್ಲಿ 1 ಎಕರೆ 34 ಗುಂಟೆ ಜಾಗ ಗುರುತಿಸಲಾಗಿದ್ದು, ಶೀಘ್ರವೇ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಡಾ.ಅಂಬರೀಷ್ ಸ್ಮಾರಕ ಪ್ರತಿಷ್ಠಾನದ ಉನ್ನತ ಮಟ್ಟದ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರಕಾರವು 5 ಕೋಟಿ ರೂ.ಒದಗಿಸಲಿದೆ. ಸ್ಮಾರಕ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ನಿರ್ದೇಶನ ನೀಡಿದರು.

ಅಲ್ಲದೆ, ಸ್ಮಾರಕ ನಿರ್ಮಾಣ ತ್ವರಿತಗತಿಯಲ್ಲಿ ನಡೆಯಲು ಅನುಕೂಲವಾಗುವಂತೆ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸುವಂತೆ ಸೂಚಿಸಿದರು. ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಷ್, ನಟ ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಎಂ.ಮಹೇಶ್ವರರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್. ಹರ್ಷ ಮತ್ತಿತರರು ಭಾಗವಹಿಸಿದ್ದರು.

ಅಂಬರೀಶ್ ಅವರ ಸಾಮಾಜಿಕ ಹಾಗೂ ಚಿತ್ರರಂಗದ ಸೇವೆಯನ್ನು ಗೌರವಿಸುತ್ತ ಅಂಬರೀಶ್ ಸ್ಮಾರಕಕ್ಕೆ 1.34 ಎಕರೆ ಭೂಮಿ ಹಾಗೂ ಅದರ ನಿರ್ಮಾಣಕ್ಕೆ ಮೊದಲ ಕಂತಾಗಿ 5 ಕೋಟಿ ರೂ.ಗಳನ್ನು ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು'

-ಸುಮಲತಾ ಅಂಬರೀಶ್, ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News