ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರಿಂದ ಧರಣಿ

Update: 2020-06-30 15:23 GMT

ಬೆಂಗಳೂರು, ಜೂ.30: ಮಾಸಿಕ 12 ಸಾವಿರ ರೂ.ಗೌರವಧನ ಹಾಗೂ ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಲ್ಲೇಶ್ವರಂನ 3ನೆ ಅಡ್ಡರಸ್ತೆಯಲ್ಲಿರುವ ಎಐಯುಟಿಯುಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದೇ ವಿಚಾರವನ್ನಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.   

ರಾಜ್ಯ ಸಂಯುಕ್ತ ಕಾರ್ಯಕರ್ತೆಯರ ಸಂಘದ ಮುಖಂಡ ರಾಮಾ, ಟಿ.ಸಿ., ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಸದ್ಯ ಸಿಗುತ್ತಿರುವ 4 ಸಾವಿರ ರೂ.ಗೌರವಧನ ಹಲವಾರು ವರ್ಷಗಳ ಹೋರಾಟದ ಪ್ರತಿಫಲವಾಗಿದ್ದು, ಈಗ ಅವರಿಗೆ ಮತ್ತಷ್ಟು ಕೆಲಸ ಹೆಚ್ಚಾಗಿದೆ. ಹೀಗಾಗಿ, ರಾಜ್ಯಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಗೌರವಧನ 12 ಸಾವಿರ ರೂ.ನಿಗದಿ ಮಾಡಬೇಕೆಂದು ಒತ್ತಾಯಿಸಿದರು.   

ಒಂದೆಡೆ ಕೊರೋನ ತಡೆಗಟ್ಟುವಲ್ಲಿ ತಮ್ಮ ಜೀವಗಳನ್ನು ಒತ್ತೆಯಿಟ್ಟು ದಿನಕ್ಕೆ 80ರಿಂದ 90 ಮನೆಗಳಿಗೆ ಅಲೆದಾಡಿ ಸರ್ವೇಗಳನ್ನು ಮಾಡಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರೆ, ಮತ್ತೊಂದೆಡೆ ತಾಯಿ ಮಕ್ಕಳ ಸಂಪೂರ್ಣ ಆರೈಕೆ, ಆಸ್ಪತ್ರೆಯ ಹೊರಗೆ ಹಾಗೂ ಒಳಗೂ ಸಹ ಹಲವಾರು ಜವಾಬ್ದಾರಿಯುತ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ ಉತ್ತಮ ಗುಣಮಟ್ಟದ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಸ್ಯಾನಿಟೈಸರ್ ಸೇರಿ ಇನ್ನಿತರ ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಆಶಾ ಬಿಬಿಎಂಪಿಯ ಅಧ್ಯಕ್ಷೆ ಫಾತಿಮಾ ಮಾತನಾಡಿ, ಸರಕಾರವು ನಮ್ಮ ಮನವಿಯನ್ನು ಈಡೇರಿಸುತ್ತದೆ ಎಂಬ ಭರವಸೆ ಹಾಗೂ ಆಶಯ ಇದೆ. ಹಾಗೆಯೇ ಬೇಡಿಕೆಗಳಿಗೆ ಸ್ಪಂದಿಸುವ ನಾವು ಸರಕಾರಕ್ಕೆ ಒಂದು ವಾರದ ಗಡುವನ್ನು ನೀಡುತ್ತಿದ್ದೇವೆ. ಒಂದು ವೇಳೆ ವಾರದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜು.10ರಿಂದ ರಾಜ್ಯಾದ್ಯಂತ ಎಲ್ಲ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿದರು. 

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಕೆ.ವಿ.ಭಟ್, ಜಿ.ಹನುಮೇಶ್, ಗೋವಿಂದರಾಜನ್, ಶ್ರೀಕಾಂತ, ರಮೇಶ್, ನಾಗರತ್ನ ಉಪಸ್ಥಿತರಿದ್ದರು. 

ಪ್ರತಿಭಟನೆಯ ಬಳಿಕ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಜಿ.ಹನುಮೇಶ್ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ಒಂದು ನಿಯೋಗವು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿತು. ಮನವಿ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಡಿಸಿಎಂ ಅವರು ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳದ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News