ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಸಭೆಯಲ್ಲಿ ನಿರ್ಣಯ

Update: 2020-06-30 16:28 GMT

ಬೆಂಗಳೂರು, ಜೂ.30: ನಗರದ ಯಲಹಂಕ ಡೈರಿ ಸರ್ಕಲ್ ಬಳಿಯ ಫ್ಲೈಓವರ್ ಗೆ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದ್ದು, ಕೊಡುಗೆ ನೀಡದ ವ್ಯಕ್ತಿಯ ಹೆಸರಿಡುವುದು ಸರಿಯಲ್ಲ ಎಂದು ವಿಪಕ್ಷ ವಿರೋಧ ವ್ಯಕ್ತಪಡಿಸಿತು.

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ, ಯಲಹಂಕ ಡೈರಿ ಸರ್ಕಲ್ ಬಳಿಯ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಲು ನಿರ್ಣಯ ಕೈಗೊಂಡ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕರು, ದೇಶಕ್ಕೆ ರಾಜ್ಯಕ್ಕೆ, ಬೆಂಗಳೂರಿಗೆ ಸಾವರ್ಕರ್ ಕೊಡುಗೆ ಏನೂ ಇಲ್ಲ. ಬೇರೆ ಯಾರಾದರೂ ಮಹನೀಯರ ಹೆಸರಿಡಲಿ ನಮ್ಮ ವಿರೋಧ ಇಲ್ಲ, ಬೇರೆ ರಾಜ್ಯದ ವ್ಯಕ್ತಿಯ, ಯಾವುದೇ ಕೊಡುಗೆ ನೀಡದ ಒಬ್ಬರ ಹೆಸರು ಬೆಂಗಳೂರಿನ ಫ್ಲೈ ಓವರ್ ಗೆ ಇಡುವುದು ಸರಿಯಲ್ಲ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ನಾವು ಕೌನ್ಸಿಲ್ ಸಭೆಯಲ್ಲೇ ಇದ್ದೆವು. ಸಾವರ್ಕರ್ ಹೆಸರು ನಿರ್ಣಯ ಮಾಡಿ ಓದಿರುವುದು ನಮ್ಮ ಯಾರ ಗಮನಕ್ಕೂ ಬಂದಿಲ್ಲ. ಕೊರೋನ ನಡುವೆ ಇದೆಂಥಾ ರಾಜಕೀಯ? ಬಿಜೆಪಿಯವರಿಗೆ ಕೊರೋನದ ನಡುವೆಯೂ ರಾಜಕೀಯ ಮುಖ್ಯವಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಈ ನಿರ್ಣಯವನ್ನು ನಾವು ಒಪ್ಪಲ್ಲ. ಇದೂ ಕೂಡ ಸುಮೋಟೊ ಅಡಿಯಲ್ಲಿ ಮಾಡಿಕೊಂಡಿರುವ ನಿರ್ಣಯ. ಹಾಗಿದ್ದರೆ ಈ ಹಿಂದೆ ಮಾಡಿದ್ದ ನಿರ್ಣಯ ಏನಾಯಿತು ಎಂದು ಮೇಯರ್ ಸ್ಪಷ್ಟಪಡಿಸಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News