ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಇಬ್ಬರು ಕೊರೋನ ಸೋಂಕಿತರು ಸಾವು: ಆರೋಪ

Update: 2020-07-01 16:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.1: ನಗರದಲ್ಲಿ ಆಂಬ್ಯುಲೆನ್ಸ್ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಇಬ್ಬರು ಕೊರೋನ ಸೋಂಕಿತ ವ್ಯಕ್ತಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಒಂದೆಡೆ ಪಾಲಿಕೆಯು ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಇಲ್ಲ. ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎನ್ನುತ್ತಿದೆ. ಮತ್ತೊಂದೆಡೆ ಬೆಡ್‍ಗಳು ಸಿಗದೇ, ಆಂಬ್ಯುಲೆನ್ಸ್ ಬಾರದೇ ಸೋಂಕಿತರು ಮೃತಪಡುತ್ತಿರುವುದು ನಗರದ ಜನರಲ್ಲಿ ಆತಂಕ ತರಿಸಿದೆ.

ಚೋಳರಪಾಳ್ಯದ 43 ವರ್ಷದ ವ್ಯಕ್ತಿ ಹಾಗೂ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ 53 ವರ್ಷದ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿಯ 53 ವರ್ಷದ ವ್ಯಕ್ತಿ ಕಳೆದ 5 ದಿನದಿಂದ ಕೆಮ್ಮು ಶೀತ ಜ್ವರದಿಂದ ಬಳಲುತ್ತಿದ್ದು, ವಿಜಯನಗರದ ಮಾರುತಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಗುರುವಾರ ರಾತ್ರಿ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದಾರೆ. ರವಿವಾರ ಸೋಂಕು ದೃಢಪಟ್ಟ ವರದಿಯನ್ನು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿ ಮೂರು ದಿನವಾದರೂ ಆಂಬ್ಯುಲೆನ್ಸ್ ಬಂದಿಲ್ಲ. ರೋಗಿಗೆ ಸೋಮವಾರದ ವೇಳೆಗೆ ಉಸಿರಾಟದ ಸಮಸ್ಯೆ ತೀವ್ರಗೊಂಡಿದ್ದು, ಬಿಬಿಎಂಪಿ ಸಿಬ್ಬಂದಿಗೆ ಮನೆಯವರು ಕರೆ ಮಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. 108ಕ್ಕೆ ಕರೆ ಮಾಡಿ ಎರಡು ಗಂಟೆ ಆದರೂ ಆಂಬ್ಯುಲೆನ್ಸ್ ಬಾರದ ಹಿನ್ನಲೆ ಖಾಸಗಿ ವಾಹನದಲ್ಲಿ ತೆರಳಿದ್ದಾರೆ. ಮಂಗಳವಾರ ರಾತ್ರಿ 11ರಿಂದ ಬೆಳಗ್ಗೆ 6 ರವರೆಗೂ 9 ಆಸ್ಪತ್ರೆಗಳನ್ನು ತಿರುಗಿದರೂ, ಯಾರೂ ಚಿಕಿತ್ಸೆ ನೀಡಲಿಲ್ಲ. ಸೋಂಕಿತರು ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ತೆಗೆದುಕೊಂಡು ಹೋದರೂ ಇಲ್ಲಿಯವರೆಗೆ ಯಾರೂ ಕನಿಷ್ಠ ಮಾಹಿತಿಯನ್ನೂ ನೀಡುತ್ತಿಲ್ಲ. ಮೃತದೇಹವನ್ನೂ ನೀಡುತ್ತಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. 

ಚೋಳರಪಾಳ್ಯದ ವ್ಯಕ್ತಿಯೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿದ್ದು, ವಿಕ್ಟೋರಿಯಾ, ಕಿಮ್ಸ್, ಕೆ.ಸಿ.ಜನರಲ್ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಅಲೆದಾಡಿದರೂ, ಬೆಡ್ ಸಿಗಲಿಲ್ಲ. ಕೊನೆಗೆ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದರು. ಬುಧವಾರ ಬೆಳಗ್ಗೆ ತಿಂಡಿ ನೀಡಲು ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವಾಗಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News