ಹಾಸ್ಟೆಲ್ ಖಾಲಿ ಮಾಡಲು ಸೂಚಿಸಿದ ವಿವಿ ಕ್ರಮ ಖಂಡನಾರ್ಹ: ಎಐಡಿಎಸ್‍ಓ

Update: 2020-07-01 17:11 GMT

ಬೆಂಗಳೂರು, ಜು.1: ಬೆಂಗಳೂರು  ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ ಬಾಲಕಿಯರ ಹಾಸ್ಟೆಲ್ ಅಧಿಕಾರಿಗಳು ಏಕಾಏಕಿ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ಖಾಲಿ ಮಾಡುವಂತೆ ಸೂಚನೆ ಜಾರಿಗೊಳಿಸಿರುವ ಕ್ರಮ ಅತ್ಯಂತ ಖಂಡನೀಯವಾದುದು ಎಂದು ಎಐಡಿಎಸ್‍ಓ ಖಂಡಿಸಿದೆ.

ಹಾಸ್ಟೆಲ್‍ನಲ್ಲಿ ಸುಮಾರು 550 ವಿದ್ಯಾರ್ಥಿಗಳು ಪ್ರತಿ ವರ್ಷ ಈ ಹಾಸ್ಟೆಲ್‍ಗೆ ಸೇರುತ್ತಾರೆ. ಮಾರ್ಚ್ ತಿಂಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯ 14 ದಿನ ರಜೆ ಘೋಷಿಸಿ ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ಸೂಚಿಸಿತ್ತು. ಈಗ ಲಾಕ್‍ಡೌನ್ ಅನ್ನು ಅನಿರೀಕ್ಷಿತ ಅವಧಿಯವರೆಗೆ  ಮುಂದುವರೆದ ಕಾರಣ,  ವಿದ್ಯಾರ್ಥಿಗಳು ಮನೆಯಲ್ಲೇ ಇರಬೇಕಾಗಿ ಬಂದಿದೆ. ಈಗ ಹಾಸ್ಟೆಲನ್ನು ಕೋವಿಡ್ ಪರಿಹಾರ ಕೇಂದ್ರವಾಗಿ ಪರಿವರ್ತಿಸಲು ಸರಕಾರ ನಿರ್ಧರಿಸಿ, ತಮ್ಮ ವಸ್ತುಗಳನ್ನು ಆದಷ್ಟು ಬೇಗ ತೆಗೆದುಕೊಂಡು ಹೋಗಬೇಕೆಂದು ಅವಸರದ ನೋಟಿಸ್ ಜಾರಿ ಮಾಡಿರುವುದು ಅತ್ಯಂತ ಖಂಡನೀಯ. ಸರಕಾರಿ ಕ್ಯಾಂಪಸ್‍ಗಳನ್ನು ಕೋವಿಡ್ ಪರಿಹಾರಕೇಂದ್ರ ಮಾಡುವುದು ಬಹಳ ಅವಶ್ಯಕವಾಗಿದೆ ಮತ್ತು ಅದಕ್ಕೆ ನಮ್ಮ ಸಹಮತ ಇದೆ. ಆದರೆ ಸಮಯ ಕೊಡದೆ ದಿಢೀರನೆ ಹಾಸ್ಟೆಲ್ ಖಾಲಿ ಮಾಡಬೇಕು ಎಂಬ ನಿರ್ಧಾರ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. 
ಕೊರೋನ ಮಹಾಮಾರಿಯು ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗುಲ್ಬರ್ಗ, ರಾಯಚೂರು, ಬೀದರ್, ಧಾರವಾಡದಂತಹ ದೂರದ ಜಿಲ್ಲೆಗಳಿಂದ ಬಂದು ಯುಜಿ ಹಾಗೂ ಪಿಜಿ ಓದುತ್ತಿರುವ ವಿದ್ಯಾರ್ಥಿಗಳಿಗೆ ದೂರದಿಂದ ಪ್ರಯಾಣ ಮಾಡಿ ತಮ್ಮ ಸಾಮಾನುಗಳನ್ನು ಹಾಗೂ ಲಗೇಜುಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ. 
ವಿದ್ಯಾರ್ಥಿಗಳ ಲಗೇಜುಗಳನ್ನು ಇಡಲು ಪರ್ಯಾಯ ವ್ಯವಸ್ಥೆ ಮಾಡಿ ಭದ್ರತೆಯನ್ನು ಒದಗಿಸಬೇಕು. ಕೋವಿಡ್ ಚಿಕಿತ್ಸೆಯ ನಂತರ ಇಡೀ ಕಟ್ಟಡವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ಸಂಕಷ್ಟದಲ್ಲಿರುವ ಹಾಗೂ ದುಃಖದಲ್ಲಿರುವ ವಿದ್ಯಾರ್ಥಿಗಳಿಗೆ ಈ ಕೂಡಲೇ ವಿವಿ ಅಧಿಕಾರಿಗಳು ಸ್ಪಂದಿಸಿ, ಅವರ ಸಮಸ್ಯೆಗೆ ಪ್ರತಿಕ್ರಿಯಿಸಬೇಕು ಎಂದು ಎಐಡಿಎಸ್‍ಓ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News