ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

Update: 2020-07-01 17:16 GMT

ಬೆಂಗಳೂರು, ಜು.1: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಹನಕ್ಕೆ ಹಗ್ಗ ಕಟ್ಟಿ ಕತ್ತೆಗಳಿಂದ ಎಳೆಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್‍ವರೆಗೆ ಜಾಥ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಹಿಂದಿನಿಂದಲೂ ಏರಿಕೆ ಮಾಡಿರುವ ಎಲ್ಲ ದರವನ್ನು ಕೂಡಲೇ ಇಳಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಕೊರೋನ ಮಹಾಮಾರಿಯಿಂದ ಜನರು ತತ್ತರಿಸಿದ್ದು, ಇಡೀ ಆರ್ಥಿಕ ವ್ಯವಸ್ಥೆಯೇ ಬಲಹೀನವಾಗಿದೆ. ಆದರೆ, ಸರಕಾರ ಜನರ ಮೇಲೆ ಹೊರೆ ಇಳಿಸುವ ಬದಲಿಗೆ, ಹೊರೆ ಹೆಚ್ಚಳ ಮಾಡುತ್ತಿದೆ. ತೈಲ ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ ಕಾರ್ಪೋರೇಟ್‍ಗಳ ಹೊಟ್ಟೆ ತುಂಬಿಸಲು ಸರಕಾರ ಹೊರಟಿದೆ ಎಂದು ವಾಟಾಳ್ ನಾಗರಾಜ್ ದೂರಿದರು.

ಕೇಂದ್ರ ಸರಕಾರ ಜನರ ಹಿತ ಕಾಪಾಡುವುದರಿಂದ ಉಳ್ಳವರನ್ನು ರಕ್ಷಿಸಿಕೊಳ್ಳುವುದು ತುರ್ತು ಅಗತ್ಯವಾಗಿಬಿಟ್ಟಿದೆ. ಆದುದರಿಂದ ಪೆಟ್ರೋಲ್, ಡೀಸೆಲ್‍ದರ ಹೆಚ್ಚಳ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದು, ಕೂಡಲೇ ಸರಕಾರ ದರಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಪೊಲೀಸರ ಅನುಮತಿಯಿಲ್ಲ: ನಗರದಲ್ಲಿ ಕೊರೋನ ಮುಂಜಾಗ್ರತಾ ಕ್ರಮವಾಗಿ ಯಾವುದೇ ಸಭೆ, ಸಮಾರಂಭ, ಧರಣಿ, ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ, ವಾಟಾಳ್ ನಾಗರಾಜ್‍ಗೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಸಿದರು. ಹೀಗಾಗಿ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News