ಜಿಎಸ್ಸೆಸ್ ಹಾಗೂ ಅನಂತಮೂರ್ತಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

Update: 2020-07-01 17:56 GMT

ಬೆಂಗಳೂರು, ಜು.1: ರಾಜ್ಯ ಸರಕಾರ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿರವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಕರ್ನಾಟಕ ವಿಕಾಸ ರಂಗ ಒತ್ತಾಯಿಸಿದೆ.

ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕನ್ನಡದ ಸಾಹಿತ್ಯ, ಸಂಸ್ಕøತಿಯನ್ನು ಸಮೃದ್ಧಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಗರದ ಕಲಾಗ್ರಾಮದಲ್ಲಿ ಜಿಎಸ್ಸೆಸ್ ಅಂತ್ಯಸಂಸ್ಕಾರ ನಡೆದ ದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭಾಗವಹಿಸಿ ಈ ಜಾಗದಲ್ಲಿಯೇ ಜಿಎಸ್ಸೆಸ್‍ರವರ ಸ್ಮಾರಕ ನಿರ್ಮಿಸಲಾಗುವುದೆಂದು ಹೇಳಿಕೆ ನೀಡಿದ್ದರು.

ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ, ಕೇರಳದ ಕೊಟ್ಟಾಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯ, ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿಯಾಗಿ, ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿ, ಇಂದಿರಾಗಾಂಧಿ ಮುಕ್ತ ವಿವಿಯ ಟ್ಯಾಗೋರ್ ಪೀಠದ ಅಧ್ಯಕ್ಷರಾಗಿ ರಾಜ್ಯ, ದೇಶದ ಏಳ್ಗೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಹಾಗೂ ಪುಣೆಯ ಫಿಲಂ ಮತ್ತು ಟೆಲಿವಿಷನ್ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದವರು.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ಬೆಳಗಿಸಿದ ಡಾ.ಜಿಎಸ್ಸೆಸ್ ಹಾಗೂ ಯು.ಆರ್.ಅನಂತಮೂರ್ತಿರವರ ಸಮಾದಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲೇ ಇವೆ. ಅಲ್ಲಿಯೇ ಅವರ ಸ್ಮಾರಕ ನಿರ್ಮಿಸಿ, ಮುಂದಿನ ಕನ್ನಡ ಪೀಳಿಗೆಗೆ ಕನ್ನಡದ ಹಿರಿಮೆ-ಗರಿಮೆ ಹೆಚ್ಚಿಸಿದ ಕನ್ನಡ ಸಾಧಕರ ಪರಿಚಯ ಮಾಡಿಸಿಕೊಡಬೇಕೆಂದು ಕರ್ನಾಟಕ ವಿಕಾಸ ರಂಗ, ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಚಾರ ವೇದಿಕೆ ಪ್ರಕಟನೆಯ ಮೂಲಕ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News