ವೈದ್ಯ ವೃಂದಕ್ಕೆ ಸಮಾಜ ಯಾವಾಗಲೂ ಋಣಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-07-01 18:02 GMT

ಬೆಂಗಳೂರು, ಜು. 1: `ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಆಂತರಿಕ ಸೈನಿಕರಂತೆ ಕೆಲಸ ಮಾಡುವ ವೈದ್ಯ ವೃಂದಕ್ಕೆ ಸಮಾಜ ಯಾವಾಗಲೂ ಋಣಿಯಾಗಿರುತ್ತದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ರಾಷ್ಟ್ರೀಯ ವೈದ್ಯರ ದಿನದ ಹಿನ್ನೆಲೆಯಲ್ಲಿ ಶುಭಾಶಯ ಕೋರಿದ್ದಾರೆ.

ಬುಧವಾರ ಟ್ವೀಟ್ ಮಾಡಿರುವ ಅವರು, ಸಾಂಕ್ರಾಮಿಕ ರೋಗಗಳ ಸವಾಲಿನ ಸನ್ನಿವೇಶಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಯ ತ್ಯಾಗ ದೊಡ್ಡದು. ವೈದ್ಯಕೀಯ ಕ್ಷೇತ್ರಕ್ಕೆ ಭಾರತರತ್ನ ಡಾ.ಬಿ.ಸಿ.ರಾಯ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥವಾಗಿ ಅವರ ಜನ್ಮದಿನದಂದು ಆಚರಿಸುವ ರಾಷ್ಟ್ರೀಯ ವೈದ್ಯರ ದಿನದ ಸಂದರ್ಭದಲ್ಲಿ ವೈದ್ಯರ ಸಮೂಹಕ್ಕೆ ಹೃತ್ಪೂರ್ವಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

'ವೈದ್ಯರ ಸಂತತಿ ಹೆಚ್ಚಲಿ'

'ರೋಗಿಗಳಿಗೆ ಸರ್ವಕಾಲಕ್ಕೂ ಚಿಕಿತ್ಸೆ ನೀಡಿ ಸಮಾಜದ ರಕ್ಷಕನ ಪಾತ್ರವನ್ನು ವಹಿಸಿರುವ ವೈದ್ಯರು ಆರೋಗ್ಯ ಸಮಾಜದ ಸೇನಾನಿಗಳು. ಕೋವಿಡ್-19 ಸೋಂಕು ಶರವೇಗದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಇಂತಹ ವೈದ್ಯರ ಸಂತತಿ ಹೆಚ್ಚಳವಾಗಲಿ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವೈದ್ಯರ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

'ಆರೋಗ್ಯಕ್ಕಾಗಿ ಪ್ರಾರ್ಥಿಸೋಣ'

'ವೈದ್ಯರಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ಕೊರೋನ ಸೋಂಕಿನ ದುರಿತ ಕಾಲದಲ್ಲಿಯೂ ಈ ವೈದ್ಯರು ಪ್ರಾಣ ಭಯ ಇಲ್ಲದೆ ನಿಸ್ವಾರ್ಥವಾಗಿ ನಮ್ಮ ಸೇವೆ ಮಾಡುತ್ತಿದ್ದಾರೆ. ಈ ವೈದ್ಯರು ಮತ್ತೆಲ್ಲ ಆರೋಗ್ಯ ಸೇವಾ ಕಾರ್ಯಕರ್ತರ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ' ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ವೈದ್ಯರ ದಿನಾಚರಣೆ ಶುಭಾಶಯ ಕೋರಿದ್ದಾರೆ.

`ಕೊರೋನ ಸೋಂಕಿನಿಂದ ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮವನ್ನು ಬೇರೆ ಸೋಂಕಿತರ ಚಿಕಿತ್ಸೆಗಾಗಿ ದಾನ ಮಾಡಬೇಕೇಂದು ಕೋರುತ್ತಿದ್ದೇನೆ. ನಿಮ್ಮ ಆರೋಗ್ಯ ರಕ್ಷಣೆಗಾಗಿ ನೂರಾರು ಮಂದಿ ಶ್ರಮಿಸುತ್ತಿದ್ದಾರೆ. ಈಗ ನೀವು ಅವರೆಲ್ಲರ ಋಣ ತೀರಿಸುವ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News