ಬೆಂಗಳೂರು: ನಗರದಲ್ಲಿ 735 ಹೊಸ ಕೊರೋನ ಪ್ರಕರಣ ದೃಢ

Update: 2020-07-01 18:34 GMT

ಬೆಂಗಳೂರು, ಜು.1: ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬುಧವಾರ ಹೊಸದಾಗಿ 735 ಪ್ರಕರಣ ದೃಢಪಟ್ಟಿದ್ದು, ನಗರದಲ್ಲಿ ಸತತ ಐದನೇ ದಿನವೂ ಸೋಂಕಿತರ ಸಂಖ್ಯೆ 500ರ ಗಡಿದಾಟಿದೆ.

ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ 5,290 ಏರಿಕೆಯಾಗಿದ್ದು, ಇಬ್ಬರು ಮೃತರಾಗಿದ್ದಾರೆ. 191 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 4,649 ಜನರು ಸಕ್ರಿಯವಾಗಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 97 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 17,892 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. 

ಮಲ್ಲೇಶ್ವರ ಅಂಗಡಿಗಳು ಸ್ವಯಂ ಪ್ರೇರಿತ ಬಂದ್
ನಗರದ ಮಲ್ಲೇಶ್ವರ ವಾಣಿಜ್ಯೋದ್ಯಮಗಳು ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿಣೆಯಿಂದ ಅಂಗಡಿಗಳು ಬಂದ್ ಮಾಡಿವೆ. ಗ್ರಾಹಕರ ಹಾಗೂ ಸಿಬ್ಬಂದಿಗಳ ಹಿತದೃಷ್ಟಿಯಿಂದ ಸ್ವಯಂಪ್ರೇರಣೆಯಿಂದ ಅಂಗಡಿ ಮುಚ್ಚುತ್ತಿದ್ದಾರೆ.

ಬಿಬಿಎಂಪಿ ಅಧಿಕಾರಿಗಳಿಗೆ ಸೋಂಕು
ಶಿವಾಜಿನಗರದ ಘನತ್ಯಾಜ್ಯ ನಿರ್ವಹಣೆ ಅಧಿಕಾರಿ ಹಾಗೂ ವಿಶೇಷ ಆಯುಕ್ತರ ಪಿಎಗೆ ಸೋಂಕು ತಗುಲಿದ್ದು, ಬಿಬಿಎಂಪಿ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ.

4.25 ಲಕ್ಷ ಮಾಸ್ಕ್ ದಂಡ
ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಇರುವವರಿಂದ ಬಿಬಿಎಂಪಿ ಒಟ್ಟು  4.25 ಲಕ್ಷ ರೂ. ದಂಡ ಸಂಗ್ರಹಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಹಾಗೂ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡಚಣೆ ಉಂಟು ಮಾಡುವವರಿಂದ ಮಾರ್ಷಲ್‍ಗಳು ದಂಡ ಸಂಗ್ರಹಿಸುತ್ತಿದ್ದು, ಬುಧವಾರ ಮಾಸ್ಕ್ ಧರಿಸದ 1,866 ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದ 259 ಮಂದಿ ಸೇರಿದಂತೆ 2,125 ಮಂದಿಯಿಂದ ಒಟ್ಟು 4.25 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News