ಕೊರೋನ ಸೋಂಕಿತರಿಗೆ ಚಿಕಿತ್ಸೆ ನಿರಾಕರಣೆ: 18 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

Update: 2020-07-02 16:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.2: ಕೊರೋನ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ನಗರದ 18 ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ನಗರದಲ್ಲಿ ಕೊರೋನ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡದೇ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಟ ನಡೆಸಲಾಗಿತ್ತು. ಹೀಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸುತ್ತಾಡಿ ನಂತರ ಸಾವನ್ನಪ್ಪಿದ್ದರು. 

ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಬೆಂಗಳೂರಿನ 18 ಪ್ರಮುಖ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ತುರ್ತು ಚಿಕಿತ್ಸೆಯ ಅಗತ್ಯವಿದ್ದರೂ ಹಾಸಿಗೆಯಿಲ್ಲ, ವೆಂಟಿಲೇಟರ್ ಇಲ್ಲ ಎಂಬ ನೆಪವೊಡ್ಡಿ ಚಿಕಿತ್ಸೆ ನೀಡಲು ನಿರಾಕರಿಸುವುದು ಅಪರಾಧ ಎಂದು ತಿಳಿಸಿದೆ.

ಕೊರೋನ ಸೋಂಕಿತ ರೋಗಿಗೆ ಚಿಕಿತ್ಸೆ ನೀಡದಿರಲು ಸೂಕ್ತ ಕಾರಣ ನೀಡಿ ಎಂದು ನೋಟಿಸ್ ನೀಡಿದೆ. ಬೆಂಗಳೂರಿನ 52 ವರ್ಷದ ವ್ಯಕ್ತಿಗೆ ತೀವ್ರ ಜ್ವರ, ವಾಂತಿ, ಹೊಟ್ಟೆನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಜೂನ್ 30ರಂದು ಅವರನ್ನು ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗಲಾಗಿತ್ತು. ಆದರೆ, ವೆಂಟಿಲೇಟರ್, ಬೆಡ್‍ಗಳ ಕೊರತೆಯ ಕಾರಣ ನೀಡಿ ಯಾವ ಆಸ್ಪತ್ರೆಗಳೂ ಅವರನ್ನು ದಾಖಲಿಸಿಕೊಂಡಿರಲಿಲ್ಲ. ನಂತರ ಅವರು ಸಾವನ್ನಪ್ಪಿದ್ದರು. 

ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಕೊರೋನ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆಸ್ಪತ್ರೆಗೆ ಅಲೆಯುವಷ್ಟರಲ್ಲಿ ಕಾಲ ಮೀರಿತ್ತು. ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಿದ ಕೂಡಲೆ ಅವರು ಪ್ರಾಣಬಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News