ಬೆಂಗಳೂರು: 889 ಹೊಸ ಕೊರೋನ ಪ್ರಕರಣ ದೃಢ; ಸೋಂಕಿಗೆ ಒಟ್ಟು 100 ಮಂದಿ ಬಲಿ

Update: 2020-07-02 17:22 GMT

ಬೆಂಗಳೂರು, ಜು.2: ನಗರದಲ್ಲಿ ಗುರುವಾರ ಹೊಸದಾಗಿ 889 ಪ್ರಕರಣ ದೃಢಪಟ್ಟಿದ್ದು, 113 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಮೂವರು ಮೃತರಾಗಿದ್ದು, ಒಟ್ಟು ಇಲ್ಲಿಯವರೆಗೆ 100 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ನಗರದಲ್ಲಿ ಸೋಂಕಿತರ ಸಂಖ್ಯೆ 6,179 ಏರಿಕೆಯಾಗಿದ್ದು,  5,505 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ನಗರದಲ್ಲಿ ಸತತ ಆರನೇ ದಿನವೂ ಸೋಂಕಿತರ ಸಂಖ್ಯೆ 500 ಗಡಿದಾಟಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 18,233 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ನಗರದಲ್ಲಿ ಒಟ್ಟು 550 ಕಂಟೈನ್ಮೆಂಟ್ ಝೋನ್‍ಗಳಾಗಿವೆ.
ಎಲೆಕ್ಟ್ರಾನಿಕ್ ಸಿಟಿಯ ಆರ್‍ಟಿಓ ಕಚೇರಿಯ ಸಿಬ್ಬಂದಿ ಕೊರೋನಕ್ಕೆ ಬಲಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಆರ್‍ಟಿಓ ಕಚೇರಿ ಡಿಎಲ್ ಕೇಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ, ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಡಿಸಿಗೆ ಕೊರೋನ ಸೋಂಕು ದೃಢ
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಕೊರೋನ ಸೋಂಕು ತಗುಲಿದೆ. ಕೆಮ್ಮು, ನೆಗಡಿ ಮತ್ತು ಜ್ವರದಿಂದ ಬಳಲುತ್ತಿದ್ದ ಅವರು ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರು. ಅಲ್ಲದೇ ಮುಂಜಾಗೃತಾ ಕ್ರಮವಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದರು.  ಜಿಲ್ಲಾಧಿಕಾರಿಗೆ ಸೋಂಕು ಪತ್ತೆ ಪರೀಕ್ಷೆಯ ವರದಿ ಬಂದಿದ್ದು, ಅವರಿಗೂ ಕೊರೋನ ಇರುವುದು ದೃಢವಾಗಿದೆ.

ಒಟ್ಟು 57.39 ಲಕ್ಷ ರೂ.ಮಾಸ್ಕ್ ದಂಡ
ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸದೆ ಇರುವವರಿಂದ ಬಿಬಿಎಂಪಿ ವಾಪ್ತಿಯ 198  ವಾರ್ಡ್‍ಗಳಲ್ಲಿ  ಒಟ್ಟು  57.39 ಲಕ್ಷ ರೂ. ದಂಡ ಸಂಗ್ರಹಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಂದ ಮಾರ್ಷಲ್‍ಗಳು ಹಾಗೂ ಪೊಲೀಸ್‍ರು ದಂಡ ಸಂಗ್ರಹಿಸುತ್ತಿದ್ದು, ಜೂನ್ ತಿಂಗಳಲ್ಲಿ ಮಾಸ್ಕ್ ಧರಿಸದ 27,421 ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದ 1,267 ಮಂದಿ ಸೇರಿದಂತೆ 28,688 ಮಂದಿಯಿಂದ ಒಟ್ಟು 57.39 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News