ಆಸ್ಪತ್ರೆಗಳ ಅಮಾನವೀಯ ನಡೆ: ತುಂಬು ಗರ್ಭಿಣಿ ಕಣ್ಣೀರು

Update: 2020-07-02 18:17 GMT

ಬೆಂಗಳೂರು, ಜು.2: ಕೋವಿಡ್-19 ನೆಪವೊಡ್ಡಿ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಕೊರೋನ ಸಂಬಂಧ ಗರ್ಭಿಣಿ ಮಹಿಳೆಯ ವರದಿ ನೆಗಟಿವ್ ಇದ್ದರೂ, ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕಿವೆ ಎಂದು ಹೇಳಲಾಗುತ್ತಿದೆ.

ಏನಿದು ಘಟನೆ?: ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಭೀಮನಕುಪ್ಪೆಯ ನಿವಾಸಿ ಗರ್ಭಿಣಿ ಮಹಿಳೆ ಪ್ರತಿ ತಿಂಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗುತ್ತಿದ್ದರು. ಗುರುವಾರ ಹೆರಿಗೆ ದಿನಾಂಕವನ್ನು ವೈದ್ಯರು ನೀಡಿದ್ದರು. ಆದರೆ, ಬುಧವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರಾತ್ರಿ ಹನ್ನೆರಡು ಗಂಟೆಗೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಅಲ್ಲಿನ ವೈದ್ಯರು ಇಲ್ಲಿ ಕೆಲವೊಂದು ಸಮಸ್ಯೆ ಇದ್ದು, ವಾಣಿ ವಿಲಾಸ್ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಅಲ್ಲಿಂದ ನೇರವಾಗಿ ವಾಣಿ ವಿಲಾಸ ಆಸ್ಪತ್ರೆಗೆ ಹೋದಾಗ ಇಲ್ಲಿ ಕೊರೋನ ಸೋಂಕಿತ ರೋಗಿಗಳು ಇದ್ದಾರೆ. ನಿಮಗೆ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದಿದ್ದಾರೆ. ತದನಂತರ, ಕಿಮ್ಸ್ ಆಸ್ಪತ್ರೆಗೆ ತೆರಳಿದರೂ, ಅಲ್ಲಿಯೂ ಅವರಿಗೆ ಸೂಕ್ತ ರೀತಿ ಸ್ಪಂದಿಸಿಲ್ಲ. 

ಬಳಿಕ ಗೋವಿಂದರಾಜ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಅವರು ಚಿಕಿತ್ಸೆ ಕೊಡಲಿಲ್ಲ. ನಂತರ ವಾರ್ಡ್ 127ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೆರಿಗೆ ಮಾಡಿಸುತ್ತೇವೆ, ಆದರೆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಸಬೂಬು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನ ಸಂಬಂಧ ವರದಿ ನೆಗಟಿವ್ ಇದ್ದರೂ, ಉದ್ದೇಶಪೂರ್ವಕವಾಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಆರೋಪಗಳ ಬೆನ್ನಲ್ಲೇ, ತುಂಬು ಗರ್ಭಿಣಿಯೊಬ್ಬರ ವಿಚಾರದಲ್ಲೂ ಆಸ್ಪತ್ರೆಗಳ ಈ ನಡೆಗೆ ಟೀಕೆಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News