ಸಮಯಕ್ಕೆ ಬಾರದ ಆ್ಯಂಬುಲೆನ್ಸ್: ಮಳೆಯಲ್ಲಿ ರಸ್ತೆ ಬದಿಯಲ್ಲಿಯೇ ಬಾಕಿಯಾದ ಕೊರೋನ ಸೋಂಕಿತನ ಶವ

Update: 2020-07-03 17:06 GMT

ಬೆಂಗಳೂರು, ಜು.3: ಕೊರೋನ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಶವ ಮೂರು ಗಂಟೆಗಳಾದರೂ ಸಾಗಿಸುವವರು ಯಾರೂ ಇಲ್ಲದೇ ರಸ್ತೆ ಬದಿಯಲ್ಲಿಯೇ ಬಿದ್ದಿದ್ದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ನಗರದ ಹನುಮಂತ ನಗರದ ನಿವಾಸಿ ಕೊರೋನ ಸೋಂಕಿನಿಂದ ಇಂದು ಸಂಜೆ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟು ಮೂರು ಗಂಟೆಗಳಾದರೂ ಶವವನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್ ಇಲ್ಲದೆ ರಸ್ತೆ ಬದಿಯಲ್ಲಿಯೇ ಶವ ಬಾಕಿಯಾಗಿತ್ತು. ಈ ವೇಳೆ ಮಳೆಯೂ ಸುರಿಯತ್ತಿತ್ತು. ಆದರೆ ಆ್ಯಂಬುಲೆನ್ಸ್ ಹಾಗೂ ಆರೋಗ್ಯ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ತಿಳಿದುಬಂದಿದೆ.

ಸುಮಾರು ಮೂರು ಗಂಟೆಗಳ ಕಾಲ ಶವವನ್ನು ಸಾಗಿಸಲು ಯಾರೂ ಬಂದಿಲ್ಲ. ಮಳೆಯಲ್ಲಿ ನೆನೆಯುತ್ತಿದ್ದರೂ ಕೂಡಾ ಅಧಿಕಾರಿಗಳು ಇತ್ತ ಕಡೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 3 ಗಂಟೆಗಳ ಬಳಿಕ ಸಿಬ್ಬಂದಿ ಆ್ಯಂಬುಲೆನ್ಸ್ ನಲ್ಲಿ ಶವ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವ್ಯಕ್ತಿಯ ಗಂಟಲ ದ್ರವವನ್ನು ಮೂರು ದಿನಗಳ ಹಿಂದೆ ಪಡೆಯಲಾಗಿತ್ತು. ನಿನ್ನೆ ಸಂಜೆ ಬಂದ ವರದಿಯಲ್ಲಿ ಇವರಿಗೆ ಕೊರೋನ ಪಾಸಿಟಿವ್ ಬಂದಿದೆ. ವರದಿ ಬರುತ್ತಿದ್ದಂತೆಯೇ ಇಂದು ಬೆಳಗ್ಗೆ ಆಸ್ಪತ್ರೆ ಸೇರಲು ಮುಂದಾದ ವ್ಯಕ್ಯಿ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಸಂಜೆ 4 ಗಂಟೆಯಾದರೂ ಆ್ಯಂಬುಲೆನ್ಸ್ ಬರಲಿಲ್ಲ ಎಂದು ಆರೋಪಿಸಲಾಗಿದೆ.

ಚಿಕಿತ್ಸೆಗೆ ತೆರಳಲು ಹದಿನೈದು ದಿನಕ್ಕಾಗುವಷ್ಟು ಬಟ್ಟೆ ತೆಗೆದುಕೊಂಡು ಸಿದ್ಧರಾಗಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟು ಮೂರು ಗಂಟೆಗಳಾದರೂ ಮೃತದೇಹವನ್ನು ಕೊಂಡೊಯ್ಯಲು ಕೂಡಾ ಆ್ಯಂಬುಲೆನ್ಸ್ ಬಂದಿರಲಿಲ್ಲ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News