ಎಸೆಸೆಲ್ಸಿ ಪರೀಕ್ಷೆ: ರಾಜ್ಯ ಸರಕಾರದ ನಿಲುವು ದೇಶಕ್ಕೆ ಮಾದರಿ- ಸಚಿವ ಸುರೇಶ್‍ ಕುಮಾರ್

Update: 2020-07-03 17:48 GMT

ಬೆಂಗಳೂರು, ಜು.3: ಹಲವು ಸವಾಲುಗಳ ನಡುವೆ ಜೂ.25ರಿಂದ ಜು.3ರವರೆಗೆ ನಡೆದ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಜ್ಯ ಸರಕಾರ ಕೈಗೊಂಡ ಕಠಿಣ ನಿಲುವು ದೇಶಕ್ಕೆ ಮಾದರಿಯಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದಕ್ಕೆ ವಿದ್ಯಾರ್ಥಿ, ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತದ ಸಹಕಾರ ಮುಖ್ಯವಾಗಿತ್ತು ಎಂದು ಕೃತಜ್ಞತೆ ಸಲ್ಲಿಸಿದರು.

ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಮಹಾರಾಷ್ಟ್ರ ಸೇರಿದಂತೆ ಬಹುಪಾಲು ರಾಜ್ಯ ಸರಕಾರಗಳು ತಮ್ಮ ಎಸೆಸೆಲ್ಸಿ ಪರೀಕ್ಷೆ ಮಾಡದೆ ಹಿಂದೆ ಸರಿದವು. ಆದರೆ, ನಾವು ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸಿದ್ದೇವೆಂದು ಅವರು ಹೇಳಿದರು.

ಪರೀಕ್ಷೆ ಆರಂಭವಾದ ಮೇಲೆ ನಾನು ವಿವಿಧ ಜಿಲ್ಲೆಗಳ 80ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ನ್ಯಾಯಾಲಯ ನೀಡಿದ ಎಸ್‍ಒಪಿಯನ್ನು ಯಾವ ಕಾರಣಕ್ಕೂ ಉಲ್ಲಂಘಿಸಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಹಾಗೂ ಹೊರಗೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಮಾಡಿ ಮುಗಿಸಿದ್ದೇವೆಂದು ಅವರು ಹೇಳಿದರು.

ಡಾಕ್ಯೂಮೆಂಟರಿ ಪ್ರದರ್ಶನ: ಪತ್ರಿಕಾಗೋಷ್ಟಿಗೂ ಮೊದಲು ಪರೀಕ್ಷೆ ಕುರಿತಂತೆ ತಯಾರಿಸಲಾದ ವಿವಿಧ ಘಟನಾವಳಿಗಳ ಡಾಕ್ಯೂಮೆಂಟರಿಯನ್ನು ಪ್ರಸ್ತುತ ಪಡಿಸಲಾಯಿತು. ಈ ವೇಳೆ ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘನೆ ವ್ಯಕ್ತಪಡಿಸಿದರು. ಹಲವು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News