ಬೆಂಗಳೂರು: ಆ್ಯಂಬುಲೆನ್ಸ್, ಸರಿಯಾಗಿ ಚಿಕಿತ್ಸೆ ಸಿಗದೆ ಐವರು ಸಾವು

Update: 2020-07-03 18:23 GMT

ಬೆಂಗಳೂರು, ಜು.3: ಕೊರೋನ ಸೋಂಕಿತ ವ್ಯಕ್ತಿಗಳಿಗೆ ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಹಾಗೂ ಆಸ್ಪತ್ರೆಯಲ್ಲಿ ಬೆಡ್ ಸಿಗದ ಹಿನ್ನೆಲೆ ಶುಕ್ರವಾರ ನಗರದಲ್ಲಿ ಹಲವರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ಮಹಿಳೆ, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ವರ್ಷದ ಮಹಿಳೆ, 58 ವರ್ಷದ ವ್ಯಕ್ತಿ, ಸಂಪಂಗಿರಾಮನಗರದ 55 ವರ್ಷದ ಸೋಂಕಿತ, ಕಲಾಸಿಪಾಳ್ಯದ 61 ವರ್ಷದ ವೃದ್ಧ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಸಂಪಂಗಿರಾಮನಗರದ 55 ವರ್ಷದ ವ್ಯಕ್ತಿ ಮನೆಯಲ್ಲೇ ಮೃತಪಟ್ಟಿದ್ದು, ಇತ್ತೀಚೆಗೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲು ಮಾಡಬೇಕು ಎನ್ನುವಷ್ಟರಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

ಕಾಚರಕನಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೃದ್ಧರಿಗೆ ಚಿಕಿತ್ಸೆ ನೀಡಲು ಅಲೆದಾಡಿಸಿದ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ವೃದ್ಧ ಮೃತಪಟ್ಟಿದ್ದಾರೆ. ಮೃತಪಟ್ಟ ವೃದ್ಧರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದ್ದು ಪತ್ನಿ ಹಾಗೂ ಮಗನನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಬೆಳ್ಳಗೆ ಸೋಂಕು ದೃಢ, ಮಧ್ಯಾಹ್ನ ಮೃತ: ಕಲಾಸಿಪಾಳ್ಯದ 61 ವರ್ಷದ ವೃದ್ಧರಿಗೆ ಶುಕ್ರವಾರ ಸೋಂಕು ಕಾಣಿಸಿಕೊಂಡಿದ್ದು, ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವೃದ್ಧ ಉಸಿರಾಟದ ತೊಂದರೆಯಾಗಿದ್ದು, ಶಂಕರಪುರ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಶುಕ್ರವಾರ ವರದಿ ಬಂದಿದ್ದು, ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ ಪಾಲಿಕೆ ಅಧಿಕಾರಿಗಳು ಮಧ್ಯಾಹ್ನವಾದರೂ ಬಂದಿಲ್ಲ. ವೃದ್ಧ ಮನೆಯಲ್ಲಿ ಮೃತಪಟ್ಟಿದ್ದು, ಸ್ಥಳೀಯರು ಪಿಪಿಇ ಕಿಟ್ ಧರಿಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಿದ್ದರೆ ವೃದ್ಧೆ ಬದುಕುತ್ತಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ: ಕಾಮಾಕ್ಷಿಪಾಳ್ಯದ 50 ವರ್ಷದ ವ್ಯಕ್ತಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಬಲಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ವ್ಯಕ್ತಿ ಬೆಳಗ್ಗೆ ಎಂದಿನಂತೆ ಪಾರ್ಕ್ ಗೆ ವಾಯು ವಿಹಾರಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳೀಯರೇ ಕರೆದೊಯ್ದಿದ್ದಾರೆ.

ಆದರೆ, ಆಸ್ಪತ್ರೆ ಸಿಬ್ಬಂದಿ ಆ ವ್ಯಕ್ತಿಯನ್ನು ಒಳಗೆ ಸೇರಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇತ್ತು. ಕೂಡಲೇ ಚಿಕಿತ್ಸೆ ಕೊಟ್ಟಿದ್ದರೆ ಬದುಕುತ್ತಿದ್ದರು. ಆದರೆ, ಆಸ್ಪತ್ರೆಯವರು ಆ ರೋಗಿಯನ್ನು ಒಳಗಡೆಯೇ ಬಿಟ್ಟುಕೊಂಡಿಲ್ಲ. ಈಗ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಚಿಕಿತ್ಸೆ ನಿರಾಕರಣೆಯಿಂದ ಯುವಕ ಸಾವು

ಇತ್ತೀಚಿಗೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 37 ವರ್ಷದ ಯುವಕ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಕೊರೋನ ವರದಿ ಪತ್ರ ಇಲ್ಲವೆಂದು ಚಿಕಿತ್ಸೆ ನಿರಾಕರಿಸಿದ್ದಾರೆ. ಉಸಿರಾಟದ ಸಮಸ್ಯೆ ಇರುವುದರಿಂದ ಕೊರೋನ ಇರಬಹುದೆಂದು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದು, ಖಾಸಗಿ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಯುವತಿ ಸೋಂಕಿಗೆ ಬಲಿ: ಯುವಜನತೆಯಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದು, ಪ್ರತಿದಿನ ದೃಢಪಡುವ ಸೋಂಕಿತರಲ್ಲಿ ಶೇ. 25 ರಷ್ಟು 30 ವರ್ಷದೊಳಗಿನವರು ಇದ್ದಾರೆ. ಮೃತಪಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಶುಕ್ರವಾರ ಥಣಿಸಂದ್ರದ 17 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News