ಬೆಂಗಳೂರಿನಲ್ಲಿ ಒಂದೇ ದಿನ 1,172 ಜನರಲ್ಲಿ ಕೊರೋನ ಸೋಂಕು, 24 ಮಂದಿ ಮೃತ

Update: 2020-07-04 17:00 GMT

ಬೆಂಗಳೂರು, ಜು.4: ನಗರದಲ್ಲಿ ದೈನಂದಿನ ಕೊರೋನ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಶನಿವಾರ ಒಂದೇ ದಿನ 1,172 ಜನರಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೆ 24 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ನಗರದಲ್ಲಿ ಸೋಂಕಿತರ ಸಂಖ್ಯೆ ಇಲ್ಲಿಯವರೆಗೆ 8,345ಕ್ಕೆ ಏರಿಕೆಯಾಗಿದ್ದು, 124 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಗದಿತ ಕೊರೋನ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 7,250 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ 129 ಜನರು ಸೋಂಕಿಗೆ ಬಲಿಯಾಗಿದ್ದು, ಶನಿವಾರ 195 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 1,88,960 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬರ್ನಾಡ್ ಮೊರಸ್‍ಗೆ ಕೊರೋನ

ಬೆಂಗಳೂರಿನ ಕ್ರೈಸ್ತ ಧಾರ್ಮಿಕ ಗುರು ಬರ್ನಾರ್ಡ್ ಮೊರಸ್ ಅವರಿಗೆ ಕೊರೋನ ಪಾಸಿಟಿವ್ ಆದ ಹಿನ್ನೆಲೆ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್‍ನಲ್ಲಿ ದಾಖಲಿಸಲಾಗಿದೆ. ಬರ್ನಾರ್ಡ್ ಮೊರಸ್ ಅವರನ್ನು ಅನಾರೋಗ್ಯದ ಹಿನ್ನೆಲೆ ಜು.2 ರಂದು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್‍ಗೆ ದಾಖಲಿಸಲಾಯಿತು. ಜುಲೈ 3 ರಂದು ಅವರಿಗೆ ಕೊರೋನ ಲಕ್ಷಣಗಳು ಕಾಣಿಸಿಕೊಂಡಿದೆ.

ಬೆಂಗಳೂರು ವಿವಿಗೆ ಕೀಟನಾಶಕ ಔಷಧಿ ಸಿಂಪಡನೆ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಕೋವಿಡ್ -19 ವೈರಾಣುವನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಶುಚಿತ್ವ ಕಾಪಾಡಿ ವೈರಾಣು ಹರಡುವುದನ್ನು ತಡೆಗಟ್ಟಲು ವಿಶ್ವವಿದ್ಯಾಲಯದ ಎಲ್ಲ ಕಚೇರಿಗಳಿಗೂ, ಕಟ್ಟಡಗಳು, ವಿವಿಧ ವಿಭಾಗಗಳು, ಕೊಠಡಿಗಳ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಕೀಟನಾಶಕ ಔಷಧಿಯನ್ನು ಸಿಂಪಡಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News