ಬೆಂಗಳೂರು: ಒಂದೇ ದಿನ 26 ಪೊಲೀಸರಿಗೆ ಕೊರೋನ ಸೋಂಕು; 9 ಠಾಣೆಗಳು ಸೀಲ್ ಡೌನ್

Update: 2020-07-04 17:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.4: ದಿನದಿಂದ ದಿನಕ್ಕೆ ಪೊಲೀಸರಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ 26 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.

ಅಗ್ನಿಶಾಮಕ ದಳದ 15 ಮಂದಿ, ಸಿಸಿಬಿ ವಿಭಾಗದ ಇಬ್ಬರು ಸಿಬ್ಬಂದಿ ಸೇರಿದಂತೆ ನಗರದ ವಿವಿಧ ಠಾಣೆಯ 26 ಪೊಲೀಸರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಸೋಂಕಿತ ಪೊಲೀಸರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ, ಇವರ ಸಂಪರ್ಕದಲ್ಲಿದ್ದ 100ಕ್ಕೂ ಹೆಚ್ಚು ಮಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

9 ಠಾಣೆ ಸೀಲ್ ಡೌನ್: ಇತ್ತೀಚಿಗಷ್ಟೇ ಇಲ್ಲಿನ ಎಂ.ಎಸ್.ಬಿಲ್ಡಿಂಗ್ ನಲ್ಲಿರುವ ಅಗ್ನಿಶಾಮಕ ಠಾಣೆಯ ಚಾಲಕರೊಬ್ಬರಿಗೆ ಸೋಂಕು ತಗುಲಿತ್ತು. ಇವರ ಸಂಪರ್ಕದಲ್ಲಿದ್ದ 100ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೋನ ಪರೀಕ್ಷೆಗೆ ಒಳಪಡಿಲಾಗಿತ್ತು. ಇದೀಗ ವರದಿ ಬಂದಿದ್ದು 15 ಮಂದಿಗೆ ಪಾಸಿಟಿವ್ ಇರುವುದು ಗೊತ್ತಾಗಿದೆ. ಇದಲ್ಲದೆ, ಸಿಸಿಬಿಯ ಮತ್ತೆ ಇಬ್ಬರಿಗೆ, ಕೋಣನಕುಂಟೆ ಠಾಣೆಯ 6, ವೈಯಾಲಿಕಾವಲ್ ಠಾಣೆಯ ಇಬ್ಬರು ಮುಖ್ಯಪೇದೆಗಳಿಗೆ, ವಿಶ್ವೇಶ್ವರಪುರ ಉಪವಿಭಾಗದ ಎಸಿಪಿ ಕಾರು ಚಾಲಕನಿಗೂ ಸೋಂಕು ತಗುಲಿದೆ. ಹೀಗಾಗಿ, ನಗರ ವ್ಯಾಪ್ತಿಯ ಒಟ್ಟು ಒಂಬತ್ತು ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಆಂಬುಲೆನ್ಸ್ ತಡ..!

ಸೋಂಕು ತಗಲಿದ ಅಗ್ನಿಶಾಮಕ ಸಿಬ್ಬಂದಿ ರಾಜಾಜಿನಗರದ ವಸತಿ ಗೃಹದಲ್ಲಿ ನೆಲೆಸಿದ್ದರು. ಇವರಿಗೆ ಶುಕ್ರವಾರ ರಾತ್ರಿ 9 ಗಂಟೆಯಲ್ಲಿ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಕರೆ ಮಾಡಿ, ಸೋಂಕು ತಗಲಿದೆ ಎಂದು ತಿಳಿಸಿದ್ದರು. ಆದರೆ, ಚಿಕಿತ್ಸೆಗೆ ಕರೆದೊಯ್ಯಲು ಆಂಬುಲೆನ್ಸ್ 3 ಗಂಟೆ ತಡವಾಗಿ ಬಂದಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News