ಬೆಂಗಳೂರಿನಲ್ಲಿ ಮುಂದುವರಿದ ಕೊರೋನ ಅಟ್ಟಹಾಸ: 1,235 ಹೊಸ ಪ್ರಕರಣ ದೃಢ, 16 ಮಂದಿ ಬಲಿ

Update: 2020-07-05 16:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.5: ನಗರದಲ್ಲಿ ಕೊರೋನ ಅಟ್ಟಹಾಸ ಮುಂದುವರಿದಿದ್ದು, ಒಂದೇ ದಿನ 1,235 ಹೊಸ ಕೊರೋನ ಪ್ರಕರಣ ದೃಢಪಟ್ಟಿದೆ. ಅಲ್ಲದೇ 16 ಮಂದಿ ಮೃತಪಟ್ಟಿದ್ದಾರೆ.

ನಗರದಲ್ಲಿ ಸೋಂಕಿತರ ಸಂಖ್ಯೆ 9,580ಕ್ಕೆ ಏರಿಕೆಯಾಗಿದ್ದು, 132 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ 8,167 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ 145 ಜನರು ಸೋಂಕಿಗೆ ಬಲಿಯಾಗಿದ್ದು, ರವಿವಾರ 302 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 19,303 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಆ್ಯಂಬುಲೆನ್ಸ್ ಬರಲಿಲ್ಲವೆಂದು ಠಾಣೆಗೆ ಬಂದರು

ಎರಡು ದಿನ ಕಳೆದರೂ ಆ್ಯಂಬುಲೆನ್ಸ್ ಬಾರದ ಕಾರಣ ಸೋಂಕಿತನನ್ನು ಆತನ ಕುಟುಂಬದವರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಘಟನೆ ನಡೆದಿದೆ.

ಕಳೆದ ಎರಡು ದಿನದ ಹಿಂದೆಯೇ ಸೋಂಕಿತನಿಗೆ ಕರೆ ಮಾಡಿದ್ದ ಬಿಬಿಎಂಪಿಯವರು ನಿಮಗೆ ಕೊರೋನ ಸೋಂಕು ದೃಢಪಟ್ಟಿದೆ. ಮನೆಯಲ್ಲೇ ಇರಿ ಎಂದಿದ್ದಾರೆ. ಆದರೆ, ಎರಡು ದಿನವಾದರೂ ಆ್ಯಂಬುಲೆನ್ಸ್ ಬಾರದ ಕಾರಣ ಮೋಹನ್ ಕುಮಾರ್ ನಗರದ 48 ವರ್ಷದ ಸೋಂಕಿತ ಮಾತನಾಡಲು ಆಗದ ಸ್ಥಿತಿಗೆ ತಲುಪಿದ್ದು, ಭಯಭೀತರಾದ ಕುಟುಂಬಸ್ಥರು ತಮ್ಮ ಸ್ವಂತ ಕಾರಿನಲ್ಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಸೋಂಕಿತ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಬಾವ ಯಶವಂತಪುರ ಠಾಣೆಗೆ ಕರೆತಂದಿದ್ದು, ನಂತರ ಅದೇ ಕಾರಿನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

1,423 ಕಂಟೈನ್ಮೆಂಟ್ ವಲಯ

ಮಹಾನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಂಟೈನ್ಮೆಂಟ್ ವಲಯಗಳು ದುಪ್ಪಟ್ಟಾಗಿವೆ. ರವಿವಾರದ ಅಂತ್ಯಕ್ಕೆ 1,423 ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಬೆಂಗಳೂರು ಪೂರ್ವ ವಲಯದಲ್ಲಿ 442, ಪಶ್ಚಿಮ ವಲಯದಲ್ಲಿ 791, ದಕ್ಷಿಣ ವಲಯದಲ್ಲಿ 118, ದಾಸರಹಳ್ಳಿ ವಲಯದಲ್ಲಿ 08, ಬೊಮ್ಮನಹಳ್ಳಿ 64, ಯಲಹಂಕ 28, ರಾಜರಾಜೇಶ್ವರಿ ನಗರ 47, ಮಹದೇವಪುರ 124 ಸ್ಥಳಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News