ಸಾರ್ವಜನಿಕ ಸ್ಥಳಗಳಲ್ಲಿ ಕೊರೋನ ಸೋಂಕಿತರ ಓಡಾಟ: ಜನರಲ್ಲಿ ಆತಂಕ

Update: 2020-07-05 18:10 GMT

ಬೆಂಗಳೂರು, ಜು.5: ನಗರದಲ್ಲಿ ಕೊರೋನ ಸೋಂಕಿತರು ತಮ್ಮನ್ನು ಕರೆದುಕೊಂಡು ಹೋಗಲು ಆಂಬುಲೆನ್ಸ್ ಬರುತ್ತಿಲ್ಲ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಕಾರಣ ಹೇಳಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ನಗರದ ವಿ.ವಿ ಪುರಂನ ಮಾವಳ್ಳಿ ಪ್ರದೇಶದಲ್ಲಿ ಕೊರೋನ ಸೋಂಕಿತ ವ್ಯಕ್ತಿ ಏರಿಯಾದಲ್ಲೆಲ್ಲ ಓಡಾಡುತ್ತಿದ್ದಾನೆ ಎಂಬ ಮಾತು ಕೇಳಿ ಬಂದಿದೆ. ಕೊರೋನ ಸೋಂಕಿತ ವ್ಯಕ್ತಿ ಕಳೆದ ಮೂರು ದಿನಗಳಿಂದ ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಕೊರೋನ ಸೋಂಕಿತರನ್ನು ಸ್ಥಳೀಯರು ಪ್ರಶ್ನಿಸಿದರೆ ಬಿಬಿಎಂಪಿ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿಲ್ಲ ನಾನೇನು ಮಾಡಲಿ ಎಂದು ಹೇಳುತ್ತಿದ್ದಾನೆ ಎನ್ನಲಾಗಿದೆ. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಂದೆಡೆ ಕೊರೋನ ಸೋಂಕಿತೆಯೊಬ್ಬರು ಗಂಟೆಗಟ್ಟಲೆ ಕಾದರೂ ಆಂಬುಲೆನ್ಸ್ ಬಂದಿಲ್ಲ. ಕೊರೋನ ಸೋಂಕು ದೃಢವಾಗಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ.

ಬಸವೇಶ್ವರ ನಗರದ ಗ್ರೌಂಡ್ ಬಳಿ ಮಹಿಳೆ ಭಾನುವಾರ ಬೆಳಗ್ಗೆ ಮಧ್ಯಾಹ್ನ 2 ಗಂಟೆವರೆಗೂ ಕಾದರೂ ಆಂಬುಲೆನ್ಸ್ ಬಂದಿಲ್ಲ. ಇದರಿಂದ ಮಹಿಳೆಗೆ ಸೋಂಕು ಇರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಆತಂಕ ಶುರುವಾಗಿದೆ. ಬಿಬಿಎಂಪಿ, ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಮಹಿಳೆ ಹೈರಾಣಾಗಿದ್ದಾರೆ.

ನಗರದ ಆಸ್ಪತ್ರೆಗಳು ನಮ್ಮಲ್ಲಿ ಬೆಡ್ ಖಾಲಿ ಇಲ್ಲ ಎಂದು ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ. ಆಂಬುಲೆನ್ಸ್ ಗಳ ವ್ಯವಸ್ಥೆ ಇಲ್ಲದೆ ಬೀದಿ ಬೀದಿಗಳಲ್ಲಿ ಸೋಂಕಿತರು ಅಲೆದಾಡುತ್ತಿದ್ದಾರೆ. ಎಷ್ಟೋ ಮಂದಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಪ್ರಾಣವನ್ನೇ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೊರೋನ ಸೋಂಕಿತರನ್ನು ಕೇಳುವವರೆ ಇಲ್ಲದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News